Connect with us

Districts

ಸಾವಿರಾರು ಜನರು, ಗಣ್ಯರ ಸಮ್ಮುಖದಲ್ಲಿ ವೀರ ಯೋಧನ ಅಂತ್ಯಸಂಸ್ಕಾರ

Published

on

– ತಾಯಿ ಕಣ್ಣೀರು, ಜಿಲ್ಲಾಡಳಿತದಿಂದ ಸಹಾಯ ಹಸ್ತದ ಭರವಸೆ

ಕೋಲಾರ: ಸಾವಿರಾರು ಜನರು ಮತ್ತು ಗಣ್ಯರ ಸಮ್ಮುಖದಲ್ಲಿ ಕೋಲಾರದ ವೀರ ಯೋಧ ಪ್ರಶಾಂತ್, ಅಮರ್ ರಹೇ ಅನ್ನೋ ಜನರ ಜಯ ಘೋಷಗಳ ನಡುವೆ ಮಣ್ಣಲ್ಲಿ ಮಣ್ಣಾಗಿದ್ದಾರೆ.

ರಸ್ತೆಯುದ್ದಕ್ಕೂ ರಸ್ತೆಯ ಎರಡೂ ಬದಿಗಳಲ್ಲೂ ಸೇರಿರುವ ಜನಸಾಗರ, ವೀರ ಯೋಧನ ಪಾರ್ಥಿವ ಶರೀರಕ್ಕೆ ಹೂಮಳೆ ಸುರಿಸುತ್ತಾ, ಎಲ್ಲರ ಬಾಯಲ್ಲೂ ಪ್ರಶಾಂತ್ ಅಮರ್ ರಹೇ.. ಅಮರ್ ರಹೇ ಅನ್ನೋ ಜಯಘೋಷ ಮೊಳಗಿತು. ಅದ್ಧೂರಿಯಾಗಿ ತ್ರಿವರ್ಣ ದ್ವಜದ ನಡುವೆ ವೀರ ಯೋಧನ ಪಾರ್ಥಿವ ಶರೀರದ ಮೆರವಣಿಗೆ, ಮತ್ತೊಂದೆಡೆ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ಬಂಗಾರಪೇಟೆ ತಾಲೂಕು ಕಣಿಂಬೆಲೆ ಗ್ರಾಮದ ನಾರಾಯಣಪ್ಪ ಹಾಗೂ ಲಕ್ಷ್ಮಮ್ಮ ದಂಪತಿಯ ಪುತ್ರ ಪ್ರಶಾಂತ್ ಕಳೆದ ಐದು ವರ್ಷಗಳಿಂದ ಗಡಿಭದ್ರತಾ ಪಡೆಯ 17ನೇ ಮದ್ರಾಸ್ ರೆಜ್‍ಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಫೆ.26 ರ ಬುಧವಾರ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದರು. ಶುಕ್ರವಾರ ಮಧ್ಯರಾತ್ರಿ ಸುಮಾರಿಗೆ ವಿಮಾನದ ಮೂಲಕ ಯೋಧನ ಪಾರ್ಥಿವ ಶರೀರ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಅಲ್ಲಿಂದ ನೇರ ಬಂಗಾರಪೇಟೆ ಪಟ್ಟಣಕ್ಕೆ ತರಲಾಗಿತ್ತು, ಈ ವೇಳೆ ಜನರು ಮಧ್ಯರಾತ್ರಿಯಲ್ಲೂ ಯೋಧನ ಪಾರ್ಥಿವ ಶರೀರವನ್ನು ಸ್ವಾಗತ ಮಾಡಿಕೊಂಡಿದ್ದರು.

ಇಂದು ಬೆಳಗ್ಗೆ 7 ಗಂಟೆಯಿಂದ ವೀರ ಯೋಧ ಪ್ರಶಾಂತ್ ಪಾರ್ಥಿವ ಶರೀರವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ, ಮಾಲೂರು ಶಾಸಕ ನಂಜೇಗೌಡ, ಸಂಸದ ಮುನಿಸ್ವಾಮಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಹಲವು ಗಣ್ಯರು ಪಕ್ಷ ಭೇದ ಮರೆತು ಹುತಾತ್ಮ ಯೋಧ ಪ್ರಶಾಂತ್‍ಗೆ ಹೂಗುಚ್ಚವಿಟ್ಟು ಅಂತಿಮ ನಮನ ಸಲ್ಲಿಸಿದರು. ಹೊಸ ಮನೆ ಕಟ್ಟಿಸಲು ಸಾಲ ಮಾಡಿ ಹಣ ನೀಡಿ ಈ ಬಾರಿ ಬಂದಾಗ ಗೃಹಪ್ರವೇಶ ಮಾಡೋಣ ಎಂದು ಹೇಳಿ ಹೋಗಿದ್ದ ಮಗ ನಮ್ಮನ್ನೆಲ್ಲಾ ಅಗಲಿದನ್ನು ನೆನೆದು ತಾಯಿ ಲಕ್ಷ್ಮಮ್ಮ ಕಣ್ಣೀರಾಕಿದರು.

10.30ರ ಸುಮಾರಿಗೆ ಯೋಧನ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬಂಗಾರಪೇಟೆ ಪಟ್ಟಣದ ಪ್ರಮುಖ ಬೀದಿ ಬೀದಿಗಳಲ್ಲಿ ಸಾವಿರಾರು ಸಂಖ್ಯೆಯ ಜನಸ್ತೋಮದ ನಡುವೆ ವೀರ ಯೋಧನ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕೊಂಡೊಯ್ಯಲಾಯಿತು. ಈ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ಜನರು ಅಮರ್ ರಹೇ ಅಮರ್ ರಹೇ ಪ್ರಶಾಂತ್ ಎಂದು ಜಯಘೋಷಗಳನ್ನು ಕೂಗುತ್ತಾ ಪಾರ್ಥಿವ ಶರೀರಕ್ಕೆ ಹೂಮಳೆ ಸುರಿಸಿದರು. ಪಾರ್ಥಿವ ಶರೀರ ಸಾಗಿದ ನಾಲ್ಕು ಕಿಲೋಮೀಟರ್ ದೂರಕ್ಕೂ ಜನ ಸಾಗರ ತುಂಬಿತ್ತು.

ಸಂಸದರು, ಶಾಸಕರುಗಳು ಪಾರ್ಥಿವ ಶರೀರದ ಜೊತೆಗೆ ನಡೆದೇ ಸಾಗಿದರು. ವೀರಯೋಧ ಪ್ರಶಾಂತ್ ಓದಿದ್ದ ಶಾಲೆಯಲ್ಲಿ ತ್ರಿವರ್ಣದ್ವಜವನ್ನು ಅರ್ಧಕ್ಕೆ ಹಾರಿಸಿ ಶಾಲೆಗೆ ರಜೆ ನೀಡಿ ಗೌರವ ಸಲ್ಲಿಸಲಾಯಿತು. ಗ್ರಾಮದ ಹೊರಗಡೆ ಸರ್ಕಾರಿ ಜಾಗದಲ್ಲಿ ಯೋಧನ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಸಾವಿರಾರು ಜನರ ನಡುವೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮೂರು ಸುತ್ತು ಕುಶಾಲು ತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಪ್ರಶಾಂತ್ ಪಾರ್ಥಿವ ಶರೀರದ ಮೇಲಿದ್ದ ತ್ರಿವರ್ಣ ಧ್ವಜವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಆಗ ಮಗನನ್ನು ನೆನೆದು ಕಣ್ಣೀರಾಕುತ್ತಿದ್ದ ಕುಟುಂಬಸ್ಥರಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಧೈರ್ಯ ಹೇಳಿ ನಿಮ್ಮ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ದೇಶಸೇವೆ ಮಾಡುತ್ತೇನೆ ಎಂದು ಕನಸು ಕಟ್ಟಿಕೊಂಡು ಸೇನೆಗೆ ಸೇರಿದ್ದ ಯುವಕ ಪ್ರಶಾಂತ್, ಇಂದು ದೇಶದ ಮಗನಾಗಿ ಮಣ್ಣಲ್ಲಿ ಮಣ್ಣಾದರು. ಆದರೆ ಅವನನ್ನೇ ನಂಬಿದ್ದ ಯೋಧ ಪ್ರಶಾಂತ್ ಕುಟುಂಬ ನಾವಿಕನನ್ನು ಕಳೆದು ಕೊಂಡ ದೋಣಿಯಂತಾಗಿದ್ದು, ಸರ್ಕಾರಗಳು ಯೋಧನ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಿದೆ.

Click to comment

Leave a Reply

Your email address will not be published. Required fields are marked *