Districts
ಉಗ್ರರ ಗುಂಡಿನ ದಾಳಿಗೆ ಕೋಲಾರದ ಯೋಧ ಹುತಾತ್ಮ

– ಕೋಲಾರದ ಕಣಿಂಬೆಲೆಯಲ್ಲಿ ಶುಕ್ರವಾರ ಅಂತ್ಯಕ್ರಿಯೆ
ಕೋಲಾರ: ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ಕಾಳಗದಲ್ಲಿ ಕೋಲಾರ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಣಿಂಬೆಲೆ ಗ್ರಾಮದ ವೀರ ಯೋಧ ಪ್ರಶಾಂತ್(26) ಹುತಾತ್ಮರಾಗಿದ್ದಾರೆ. ಪ್ರಶಾಂತ್ 17ನೇ ಮದ್ರಾಸ್ ರೆಜಿಮೆಂಟ್‍ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಎರಡು ದಿನಗಳ ಹಿಂದೆ ಜಮ್ಮು- ಕಾಶ್ಮೀರದಲ್ಲಿ ನಡೆದ ಉಗ್ರರ ಗುಂಡಿನ ಕಾಳಗದಲ್ಲಿ ವೀರ ಮರಣಹೊಂದಿದ್ದಾರೆ.
ತಂದೆ ನಾರಾಯಣಸ್ವಾಮಿ ಹಾಗೂ ತಂಗಿಯನ್ನು ಕಳೆದುಕೊಂಡಿದ್ದ ಪ್ರಶಾಂತ್ ಅವರು ತಮ್ಮ ತಾಯಿ ಲಕ್ಷ್ಮಮ್ಮ ಜೊತೆಗೆ ವಾಸವಿದ್ದರು. ಪ್ರಶಾಂತ್ ಅವರ ಅಣ್ಣ ಮದುವೆಯಾಗಿ ತಮಿಳುನಾಡಿನ ಹೊಸೂರಿನಲ್ಲಿದ್ದು, ಅವರ ಅಕ್ಕನಿಗೂ ಮದುವೆಯಾಗಿದೆ.
ಶುಕ್ರವಾರ ಬಂಗಾರಪೇಟೆಯ ಸ್ವಗ್ರಾಮ ಕಣಿಂಬೆಲೆಗೆ ಹುತಾತ್ಮ ಯೋಧನ ಪಾರ್ಥಿವ ಶರೀರ ಆಗಮಿಸಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನಡೆಯಲಿದೆ.
