Connect with us

Bengaluru City

ಒಂದು ಕೈಯಲ್ಲಿ ನಾರಾಯಣ, ಇನ್ನೊಂದು ಕೈಯಲ್ಲಿ ಲಕ್ಷ್ಮಿ

Published

on

– ಮುಳಬಾಗಿಲಿನಲ್ಲಿದೆ ಇತಿಹಾಸ ಪ್ರಸಿದ್ಧ ಗರುಡ ದೇವಾಲಯ
– ದೇವರ ದರ್ಶನಗೈದ್ರೆ ಅದೃಷ್ಟ ಬರುತ್ತದೆಯಂತೆ

ಚಿನ್ನದ ನಾಡು, ಏಷ್ಯಾ ಎರಡನೇಯ ಅತೀ ದೊಡ್ಡ ಟೊಮೆಟೊ ಮಾರುಕಟ್ಟೆ ಹೊಂದಿರುವ ಏಕೈಕ ಜಿಲ್ಲೆ ಕೋಲಾರ. ಕುವಲಾಲಪುರ ಅಂತಾ ಕರೆಸಿಕೊಳ್ಳುತ್ತಿದ್ದ ಈ ಪ್ರದೇಶ ತದನಂತರ ಕೋಲಾರವಾಗಿದೆ. ಇದಷ್ಟೇ ಅಲ್ಲ, ಅನೇಕ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳನ್ನ ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ ಈ ಜಿಲ್ಲೆ. ಅದರಲ್ಲೊಂದು ಐತಿಹಾಸಿಕ ಸ್ಥಳ, ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮದಲ್ಲಿರೋ ಗರುಡ ದೇವಸ್ಥಾನ.

ರಾಮಾಯಣ ಮತ್ತು ಮಹಾಭಾರತದ ಹಿನ್ನೆಲೆ ಹೊಂದಿರುವ ಸ್ಥಳ ಇದಾಗಿದ್ದು, ದ್ರಾವಿಡ ಶೈಲಿಯಲ್ಲಿ ದೇವಾಲಯ ನಿರ್ಮಾಣವಾಗಿದೆ. ಇಲ್ಲಿ ಸೇವೆ ಸಲ್ಲಿಸಿದರೆ 8 ರೀತಿಯ ಸರ್ಪ ದೋಷಗಳು ನಿವಾರಣೆ ಕಲ್ಯಾಣ ಭಾಗ್ಯ, ಸಂತಾನ ಭಾಗ್ಯ ಸಿಗುತ್ತದೆ ಎಂಬ ನಂಬಿಕೆಯಿದೆ. ವಾಮಾಚಾರ, ಮಾಟಗಳು ಇಲ್ಲಿ ನಿವಾರಣೆಯಾಗುತ್ತದೆ ಎಂದು ಭಕ್ತರು ನಂಬಿಕೆ ಇಟ್ಟಿದ್ದಾರೆ. ಪ್ರತಿ ಶನಿವಾರ, ಭಾನುವಾರ ದೇವಾಲಯಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

ರಾಮಾಯಣ ಮತ್ತು ಮಹಾಭಾರತದ ಕಥೆಗಳಿಗೂ ದೇವಾಲಯಕ್ಕೆ ಸಂಬಂಧವಿದೆ. ರಾವಣ ಸೀತೆಯನ್ನ ಅಪಹರಿಸಿಕೊಂಡು ಪುಷ್ಪಕ ವಿಮಾನದಲ್ಲಿ ಲಂಕೆಗೆ ಕರೆದುಕೊಂಡು ಹೋಗುವಾಗ, ವಿಷ್ಣುವಿನ ವಾಹನ ಜಠಾಯು ಪಕ್ಷಿ ಸೀತೆಯನ್ನ ಕಾಪಾಡಲು ಮುಂದಾಗುತ್ತೆ. ಆಗ ರಾವಣ ಹಾಗೂ ಜಠಾಯುವಿಗೆ ಯುದ್ಧ ನಡೆಯುತ್ತೆ. ಈ ವೇಳೆ ಜಠಾಯುವಿನ ಎರಡು ರೆಕ್ಕೆಗಳನ್ನ ರಾವಣ ಕತ್ತರಿಸಿ ಹಾಕುತ್ತಾನೆ. ಆಗ ಆ ಎರಡು ರೆಕ್ಕೆಗಳು ಬಿದ್ದ ಜಾಗವೇ ಈ ಗರುಡ ದೇವಸ್ಥಾನ ಎಂಬ ನಂಬಿಕೆಯಿದೆ.

ಇಲ್ಲಿರುವ ಆಂಜನೇಯ ಸ್ವಾಮಿಯನ್ನ ಎಲ್ಲಿಯೂ ಕಂಡಿರಲು ಸಾಧ್ಯವಿಲ್ಲ, ಯಾಕಂದ್ರೆ ಈ ಆಂಜನೇಯ ತನ್ನ ಕೈಯಲ್ಲಿ ಬ್ರಹ್ಮಾಸ್ತ್ರವನ್ನ ಹೊಂದಿದ್ದಾನೆ. ಈ ದೇವಾಲಯ ಸಾವಿರ ವರ್ಷಗಳ ಹಿಂದೆಯೆ ತಮಿಳುನಾಡಿನ ರಾಮಾನುಜಾಚಾರ್ಯರಿಂದ ಪ್ರತಿಷ್ಠಾಪನೆ ಮಾಡಲಾಗಿದ್ದು, ವಿಷ್ಣು ವರ ಕೊಟ್ಟು ಭೂಲೋಕಕ್ಕೆ ಹೋಗು ಎಂದಾಗ ಗರುಡ ಇಲ್ಲಿ ಬಂದು ನೆಲೆಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಗರುಡ ದೇವರ ದರ್ಶನ ಮಾಡಿದಾಗ ಅದೃಷ್ಟ ಖುಲಾಯಿಸುತ್ತೆ ಎನ್ನುವುದು ಗರುಡ ಪುರಾಣಗಳಲ್ಲಿ ಕಾಣಬಹುದಾಗಿದೆ.

ಒಂದು ಕೈಯಲ್ಲಿ ನಾರಾಯಣ, ಇನ್ನೊಂದು ಕೈಯಲ್ಲಿ ಲಕ್ಷ್ಮಿಯನ್ನ ಹೊಂದಿರುವ ವಿಶ್ವದ ಏಕೈಕ ಗರುಡ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಈ ದೇವಾಲಯ ಪಾತ್ರವಾಗಿದೆ. ಮಹಾಭಾರತದ ವೇಳೆ ಅರ್ಜುನನಿಂದ ಶ್ರೀ ಗರುಡ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ರಾವಣನಿಂದ ಜಠಾಯು ಕೊಲ್ಲಲ್ಪಟ್ಟ ಸ್ಥಳ ಇದಾಗಿದ್ದರಿಂದ ಇದಕ್ಕೆ ಕೊಲದೇವಿ ಎಂಬ ಹೆಸರು ಬಂದಿದೆ ಅನ್ನೋದು ಪ್ರತೀತಿ. ಅಷ್ಟೇ ಅಲ್ಲ, ಹಲವು ಶತಮಾನಗಳ ಹಿಂದೆ ಭೃಘು ಮಹರ್ಷಿಗಳಿಂದ ಈ ಪ್ರದೇಶಕ್ಕೆ ಕೊಲದೇವಿ ಎಂಬ ಹೆಸರು ಬಂದಿದೆ ಅಂತಾನೂ ಹೇಳಲಾಗುತ್ತಿದೆ.

ಮುಳಬಾಗಿಲು ತಾಲೂಕಿನಿಂದ ಈ ಗ್ರಾಮಕ್ಕೆ 15 ಕಿಲೋಮೀಟರ್ ದೂರವಿದ್ದು, ಕೋಲಾರದಿಂದ ಮೂಡಿಯನೂರು ಕ್ರಾಸ್ ಮಾರ್ಗವಾಗಿಯೂ ಹೋಗಬಹುದು. ಬೆಂಗಳೂರಿನಿಂದ ಮುಳಬಾಗಿಲಿಗೆ 100 ಕಿ.ಮೀ ದೂರವಿದ್ದು, ಬೆಂಗಳೂರಿನಿಂದ ಕೋಲಾರಕ್ಕೆ 80 ಕಿ.ಮೀ ದೂರವಿದೆ.

– ಅರುಣ್ ಬಡಿಗೇರ್

Click to comment

Leave a Reply

Your email address will not be published. Required fields are marked *

www.publictv.in