ಕೋಲಾರ: ನಗರಸಭೆ ಮುಂದೆ ಮೋಟಾರ್ ಪಂಪ್ ಅನ್ನು ಶವದ ಹಾಗೆ ಮಲಗಿಸಿ ಕೋಲಾರದ ಜನ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಕೋಲಾರ ವಾರ್ಡ್ ನಂ.17 ರ ಶಹೀಂ ಷಾ ಬಡಾವಣೆಯಲ್ಲಿರುವ ಮೋಟಾರ್ ಪಂಪ್ ಹಾಳಾಗಿದ್ದು, 15 ದಿನಗಳಿಂದ ನೀರು ಬರುತ್ತಿರಲಿಲ್ಲ. ಕೆಟ್ಟು ಹೋಗಿರುವ ಪಂಪ್ ಸರಿ ಪಡಿಸುವಂತೆ ನಗರಸಭೆಗೆ ದೂರು ನೀಡಿದರು ಏನೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಅಲ್ಲಿನ ಜನರು ಮೋಟಾರ್ ಪಂಪ್ ಮೇಲೆ ಬಿಳಿ ಬಟ್ಟೆ ಮುಚ್ಚಿ, ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಮಾಡುವ ಮೂಲಕ ನಗರಸಭೆ ಮುಂಭಾಗ ಪ್ರತಿಭಟನೆ ಮಾಡಿದ್ದಾರೆ.
2 ಗಂಟೆಗಳ ಕಾಲ ಈ ಪ್ರತಿಭಟನೆ ನಡೆದ ಬಳಿಕ ಸ್ಥಳಕ್ಕೆ ನಗರಸಭೆ ಎಂಜಿನಿಯರ್ ಪೂಜಾರಪ್ಪ ಆಗಮಿಸಿದರು. ಈ ವೇಳೆ ಪ್ರತಿಭಟನಾ ನಿರತ ಜನ ಅವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಪೂಜಾರಪ್ಪ ಜನರಿಗೆ ಪಂಪ್ ಸರಿಪಡಿಸಿ ಕೊಡುವುದಾಗಿ ಭರವಸೆ ನೀಡಿದರು.