ಕೋಲಾರ: 2018ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಲಾರ ಜಿಲ್ಲೆಯ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಕಳೆದ ಕೆಲವು ದಿನಗಳ ಹಿಂದೆ ಚಿಂತಾಮಣಿ ಶಾಸಕರಾದ ಜೆ.ಕೆ ಕೃಷ್ಣ ರೆಡ್ಡಿ ತಮ್ಮ ಮತದಾರರನ್ನು ಸೆಳೆಯಲು ಬಾಡೂಟ ಕಾರ್ಯಕ್ರಮ ಏರ್ಪಡಿಸಿದಂತೆ. ಇಂದು ಕೋಲಾರ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರು ಟಿಪ್ಪು ಜಯಂತಿ ಆಚರಣೆಯ ಪೂರ್ವಭಾವಿ ಸಭೆ ಹೆಸರಲ್ಲಿ ಬಾಡೂಟ ಏರ್ಪಡಿಸಿದ್ದಾರೆ.
ಕೋಲಾರದ ಬೈರೇಗೌಡ ನಗರದ ಶಾಸಕರ ನಿವಾಸದ ಬಳಿ ಮುಸ್ಲಿಂ ಮುಖಂಡರಿಗೆ ಸಭೆಗೆ ಆಹ್ವಾನಿಸಿದ್ದಾರೆ. ಸಭೆಯಲ್ಲಿ ಭಾಗವಹಿಸುವ ಮುಖಂಡರಿಗಾಗಿ ಮಧ್ಯಾಹ್ನದ ಊಟಕ್ಕೆ ಭರ್ಜರಿ ಬಾಡೂಟ ತಯಾರಿ ಮಾಡಿಸಿದ್ದು, ಸುಮಾರು 300 ಕೆ.ಜಿ ಚಿಕನ್ ಧಮ್ ಬಿರಿಯಾನಿ ಮಾಡಿಸಲಾಗಿದೆ.
Advertisement
ಆದರೆ ಇಂದು 11 ಗಂಟೆಗೆ ನಿಗಧಿಯಾಗಿದ್ದ ಸಭೆಗೆ ಒಂದು ಗಂಟೆಯಾದರು ಯಾವ ಮುಖಂಡರೂ ಬಾರದ ಹಿನ್ನೆಲೆ ಶಾಸಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. 2013 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ವರ್ತೂರ್ ಪ್ರಕಾಶ್ ಅವರಿಗೆ ಮುಸ್ಲಿಂ ಸಮುದಾಯದ ಮತಗಳು ದೊರೆತಿರಲಿಲ್ಲ. ಅದ್ದರಿಂದಲೇ ಈ ಬಾರಿ ಮುಸ್ಲಿಂ ಮತಗಳನ್ನು ಸೆಳೆಯಲು ಭರ್ಜರಿ ತಯಾರಿ ನಡೆಸಲಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.