– ಕೈ, ಕಮಲ-ತೆನೆ ಪಾಳಯದಲ್ಲಿ ಬಗೆಹರಿಯದ ಟಿಕೆಟ್ ಕಗ್ಗಂಟು
ಕೋಲಾರ: ಚಿನ್ನ, ಹಾಲು, ರೇಷ್ಮೆ ಮತ್ತು ತರಕಾರಿಗಳಿಗೆ ಪ್ರಸಿದ್ಧಿ ಪಡೆದಿರುವ ಕ್ಷೇತ್ರ ಕೋಲಾರ. ಚಿನ್ನದ ನಾಡು ಎಂದು ರಾಜ್ಯದಲ್ಲಿ ಹೆಸರು ಪಡೆದಿರುವ ಕ್ಷೇತ್ರವೂ ಹೌದು. ಇಡೀ ದೇಶಕ್ಕೆ ಚಿನ್ನ ನೀಡುವ ಜೊತೆಗೆ ಹಾಲಿನ ಕ್ಷೀರ ಕ್ರಾಂತಿಯನ್ನು ನೀಡುವ ಮೂಲಕ ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕೋಲಾರ ಲೋಕಸಭಾ (Lok Sabha Election 2024) ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮೀಸಲು ಕ್ಷೇತ್ರವಾಗಿದೆ.
Advertisement
ಕೋಲಾರ (Kolar Lok Sabha Election) ಮೀಸಲು ಲೋಕಸಭೆ ಕ್ಷೇತ್ರ. ಮುಖ್ಯವಾಗಿ ಮೀಸಲು ಕ್ಷೇತ್ರವಾಗಿರುವ ಜಿಲ್ಲೆಗೆ ಜಾತಿ ಆಧಾರದಲ್ಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮಾನದಂಡ ಅಂದಿನಿಂದಲೂ ಬೆಳೆದುಕೊಂಡು ಬಂದಿದೆ. ಮೀಸಲು ಕ್ಷೇತ್ರವಾದ್ದರಿಂದ ಬಹುತೇಕ ಹೆಚ್ಚಿನ ಮತದಾರರನ್ನು ಅಂದರೆ 6 ಲಕ್ಷ ಮಂದಿ ಎಸ್‌ಸಿ, ಎಸ್‌ಟಿ ಸಮುದಾಯ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನವನ್ನು ಮುಸ್ಲಿಮರು ಪಡೆದುಕೊಂಡಿದ್ದು, 3 ಲಕ್ಷ ಜನಸಂಖ್ಯೆ ಇದೆ. ಮೂರನೇ ಸ್ಥಾನದಲ್ಲಿ ಒಕ್ಕಲಿಗ ಜನಾಂಗದವರು 3 ಲಕ್ಷ ಜನರಿದ್ದಾರೆ. ಇತರೆ ಎಲ್ಲಾ ಜಾತಿಯವರು ಸಹ 3 ಲಕ್ಷ ಜನರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿರುವ ಎಸ್‌ಸಿ/ಎಸ್‌ಟಿ ಸಮುದಾಯದವರು ಮೂರು ಪಕ್ಷಗಳ ಮತದಾರರನ್ನು ಬೆಂಬಲಿಸಿದರೆ, ಜಿಲ್ಲೆಯಲ್ಲಿ ಬಹುತೇಕ ಅಲ್ಪಸಂಖ್ಯಾತರು ಕಾಂಗ್ರೆಸ್‌ನ (Congress) ಕೈ ಹಿಡಿಯುತ್ತಲೇ ಬಂದಿದ್ದಾರೆ. ಇನ್ನು ಮೂರನೇ ದೊಡ್ಡ ಸಮುದಾಯ ಎಂಬ ಹೆಗ್ಗಳಿಕೆ ಹೊಂದಿರವ ಒಕ್ಕಲಿಗರು ಜೆಡಿಎಸ್‌ನ ಪರವಾಗಿದ್ದಾರೆ. ಉಳಿದ ಎಲ್ಲಾ ಜಾತಿಯವರು ಸಹ ಮೂರು ಪಕ್ಷಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: Lok Sabha 2024: ಕೋಟೆ ನಾಡಿಗೆ ಯಾರಾಗ್ತಾರೆ ಒಡೆಯಾ?
Advertisement
Advertisement
ಕ್ಷೇತ್ರ ಪರಿಚಯ
1952 ರ ಸಂದರ್ಭದಲ್ಲಿ ಕೋಲಾರ ಲೋಕಸಭಾ ಕ್ಷೇತ್ರವು ದ್ವಿಸದಸ್ಯರ ಕ್ಷೇತ್ರವಾಗಿತ್ತು. ಕಾಂಗ್ರೆಸ್ ಪಕ್ಷದಿಂದ ದೊಡ್ಡತಿಮ್ಮಯ್ಯ ಮತ್ತು ಎಂ.ವಿ.ಕೃಷ್ಣಪ್ಪ ಮೊದಲ ಸಂಸದರಾಗಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1962 ರಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ವಿಂಗಡಿಸಲಾಯಿತು. ಆಗ ಕೋಲಾರ ಏಕಸದಸ್ಯ ಕ್ಷೇತ್ರವಾಗಿ ಮಾರ್ಪಟ್ಟಿತು. ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. 1952 ರಿಂದ 2014 ರ ವರೆಗೆ (1984 ರಲ್ಲಿ ಜನತಾ ಪಕ್ಷ ಗೆಲುವು ಸಾಧಿಸಿದ್ದು ಬಿಟ್ಟರೆ) ಕಾಂಗ್ರೆಸ್ ಅಭ್ಯರ್ಥಿಗಳೇ ಇಲ್ಲಿ ಜಯಶಾಲಿಗಳಾಗಿದ್ದರು. ನಂತರ 2019 ರ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಗೆದ್ದು ಹೊಸ ಇತಿಹಾಸ ಬರೆಯಿತು.
Advertisement
ವಿಧಾನಸಭಾ ಕ್ಷೇತ್ರಗಳೆಷ್ಟು?
ಕೋಲಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಮತ್ತು ಚಿಕ್ಕಬಳ್ಳಾಪುರದ 2 ಕ್ಷೇತ್ರಗಳು ಸೇರಿ ಒಟ್ಟು 8 ಕ್ಷೇತ್ರಗಳು ಕೋಲಾರ ಲೋಕಸಭಾ ವ್ಯಾಪ್ತಿಗೆ ಬರಲಿದೆ. ಸಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ ಗೋಲ್ಡ್ ಫೀಲ್ಡ್ಸ್, ಬಂಗಾರಪೇಟೆ, ಕೋಲಾರ, ಮಾಲೂರು ವಿಧಾನಸಭಾ ಕ್ಷೇತ್ರಗಳು. ಇದನ್ನೂ ಓದಿ: Chikkodi Lok Sabha 2024: ‘ಕೈ’ ತಪ್ಪಿ ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯುತ್ತಾ? – ಮತ್ತೊಂದು ಗೆಲುವಿಗೆ ಬಿಜೆಪಿ ತಂತ್ರವೇನು?
ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಕಾಂಗ್ರೆಸ್‌ನ ಕೊತ್ತೂರು ಮಂಜುನಾಥ್, ಬಂಗಾರಪೇಟೆದಲ್ಲಿ ಕಾಂಗ್ರೆಸ್‌ನ ಎಸ್.ಎನ್.ನಾರಾಯಣಸ್ವಾಮಿ, ಮಾಲೂರಿನಲ್ಲಿ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ, ಕೆಜಿಎಫ್‌ನಲ್ಲಿ ಕಾಂಗ್ರೆಸ್‌ನ ಎಂ.ರೂಪಕಲಾ (ಸಂಸದ ಮುನಿಯಪ್ಪ ಮಗಳು), ಮುಳಬಾಗಲಿನಲ್ಲಿ ಜೆಡಿಎಸ್‌ನ ಸಮೃದ್ದಿ ಮಂಜುನಾಥ್, ಶ್ರೀನಿವಾಸಪುರದ ಜೆಡಿಎಸ್‌ನ ವೆಂಕಟಶಿವಾರೆಡ್ಡಿ, ಶಿಡ್ಲಘಟ್ಟದಲ್ಲಿ ಜೆಡಿಎಸ್‌ನ ಬಿ.ಎನ್.ರವಿಕುಮಾರ್, ಚಿಂತಾಮಣಿಯಲ್ಲಿ ಕಾಂಗ್ರೆಸ್‌ನ ಎಂ.ಸಿ.ಸುಧಾಕರ್ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ.
2019 ರ ಲೋಕಸಭೆ ಚುನಾವಣೆಯಲ್ಲಿ ಏನಾಗಿತ್ತು?
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ (BJP) ಎಸ್.ಮುನಿಸ್ವಾಮಿ (S.Muniswamy) ಗೆಲುವು ದಾಖಲಿಸಿ ಇತಿಹಾಸ ಬರೆದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೋಲಾರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದರು. ಎಸ್.ಮುನಿಸ್ವಾಮಿ 7,07,863 ಹಾಗೂ ಕಾಂಗ್ರೆಸ್ ಕೆ.ಹೆಚ್.ಮುನಿಯಪ್ಪ (K.H.Muniyappa) 4,98,159 ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ತನ್ನ ಎದುರಾಳಿ ಕಾಂಗ್ರೆಸ್‌ನ ಮುನಿಯಪ್ಪ ಅವರನ್ನು 2,09,704 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ಮತದಾರರ ಸಂಖ್ಯೆ
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 17,08,565 ಇದೆ. ಈ ಪೈಕಿ ಪುರುಷರು 8,45,696 ಹಾಗೂ ಮಹಿಳೆಯರು 8,62,716 ಮತದಾರರಿದ್ದಾರೆ. ಇದನ್ನೂ ಓದಿ: Davanagere Lok Sabha 2024: ಬೆಣ್ಣೆ ನಗರಿನ ಕುಟುಂಬದ ಭದ್ರಕೋಟೆ ಮಾಡ್ತಾರಾ ಇಲ್ಲ ‘ಕೈ’ ಹಿಡೀತಾರಾ ಜನ?
ಕಾಂಗ್ರೆಸ್ ನಿರೀಕ್ಷಿತ ಅಭ್ಯರ್ಥಿ
ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಸೋಲಿಲ್ಲದ ಸರದಾರ ಎಂದೇ ಹೆಸರಾಗಿದ್ದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಕಳೆದ ಬಾರಿ ಸೋಲೊಪ್ಪಿಕೊಂಡು ಹಣೆಪಟ್ಟಿ ಕಳೆದುಕೊಂಡಿದ್ದರು. ಕಳೆದ 7 ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಗಳಿಸಿ ಒಂದು ಬಾರಿ ಸೋತಿರುವ ಮುನಿಯಪ್ಪ ಬಾರಿಯೂ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಖಚಿತ.
ನಿರೀಕ್ಷಿತ ಬಿಜೆಪಿ ಅಭ್ಯರ್ಥಿ
ಹಾಲಿ ಸಂಸದ ಎಸ್.ಮುನಿಸ್ವಾಮಿ ಸಹ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಸ್ವತಂತ್ರ‍್ಯಾನಂತರ 18ನೇ ಲೋಕಸಭೆಯಲ್ಲಿ ಮೊದಲ ಬಾರಿಗೆ ಚಿನ್ನದ ನಾಡು ಕೋಲಾರದಲ್ಲಿ ಕಮಲ ಅರಳಿದ್ದು ಇದೆ ಮುನಿಸ್ವಾಮಿಯಿಂದ. ಲೋಕಸಭೆಗೆ ನಡೆದ 17 ಚುನಾವಣೆಗಳಲ್ಲಿ ಪ್ರಾಬಲ್ಯ ಸಾಧಿಸಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೋಲಾರದಲ್ಲಿ ಇದೇ ಮೊದಲ ಬಾರಿಗೆ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಕಮಲ ಅರಳಿದೆ.
ಜೆಡಿಎಸ್‌ಗೆ ಹೋಗುತ್ತಾ ಕ್ಷೇತ್ರ?
ಆದರೆ ಈಗ ರಾಜಕೀಯ ಸನ್ನಿವೇಶ ಬದಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಈ ಬಾರಿ ಕ್ಷೇತ್ರವನ್ನು ತನಗೆ ಬಿಟ್ಟುಕೊಡುವಂತೆ ಜೆಡಿಎಸ್ ಮನವಿ ಮಾಡುತ್ತಿದೆ. ಮೈತ್ರಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಸುತ್ತಾರೆ ಅನ್ನೋ ಕುತೂಹಲ ಮೂಡಿದೆ. ಜೆಡಿಎಸ್‌ನಿಂದ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್, ಬಂಗಾರಪೇಟೆ ಮಲ್ಲೇಶ್ ಬಾಬು, ದೇವನಹಳ್ಳಿ ನಿಸರ್ಗ ನಾರಾಯಣಸ್ವಾಮಿ ನಿರೀಕ್ಷಿತ ಅಭ್ಯರ್ಥಿಗಳಾಗಿದ್ದಾರೆ. ಇದನ್ನೂ ಓದಿ: Hassan Lok Sabha 2024: ದೊಡ್ಡಗೌಡ್ರ ಭದ್ರಕೋಟೆ ಭೇದಿಸಲು ಕಾಂಗ್ರೆಸ್ ಕಸರತ್ತು!
ಕಾಂಗ್ರೆಸ್ ಪ್ಲಸ್: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು, ಲೋಕಸಭಾ ಕ್ಷೇತ್ರದ 8ರ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿರುವುದು, ಜಿಲ್ಲೆಯಲ್ಲಿ ಮುಸ್ಲಿಂ ಮತಗಳು ಬಹುತೇಕ ಕಾಂಗ್ರೆಸ್ ಪರವಾಗಿರುವುದು.
ಮೈನಸ್: ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಾರ್ಟಿಯಲ್ಲಿರುವ ಭಿನ್ನಮತ, ಹಿಂದುತ್ವದ ವಿಚಾರದಲ್ಲಿ ಬ್ಯಾಲೆನ್ಸಿಂಗ್ ಪ್ರಯತ್ನ, ಹೆಚ್ಚಾಗಿರುವ ಆಕಾಂಕ್ಷಿ ಅಭ್ಯರ್ಥಿಗಳು, ಆಹಾರ ಸಚಿವ ಮುನಿಯಪ್ಪ ಅಥವಾ ಅಳಿಯನಿಗೆ ಟಿಕೆಟ್ ಕೊಟ್ಟರೆ ಭಿನ್ನಮತ, ಗುಂಪುಗಾರಿಕೆ ಮತ್ತೆ ಸ್ಫೋಟದ ಸಾಧ್ಯತೆ.
ಬಿಜೆಪಿ-ಜೆಡಿಎಸ್ ಪ್ಲಸ್: ಈಗಾಗಲೇ ಕೋಲಾರ ಸಂಸದ ಕ್ಷೇತ್ರದಲ್ಲಿ ಬಿಜೆಪಿ ಲೋಕಸಭಾ ಸದಸ್ಯರು ಇರುವುದು, ಮೈತ್ರಿಯಾಗಿರುವ ಕಾರಣ ಜೆಡಿಎಸ್ ಮತದಾರರು ಅನಿವಾರ್ಯವಾಗಿ ಬಿಜೆಪಿ ಪರ ಕೆಲಸ ಮಾಡುವುದು, ಬಹುಸಂಖ್ಯಾತ ಹಿಂದೂ ಮತಗಳ ಪೈಕಿ ಹೆಚ್ಚಿನ ಮತಗಳು ಬಿಜೆಪಿಗೆ ಸಿಗಬಹುದು ಎಂಬ ನಿರೀಕ್ಷೆ.
ಮೈನಸ್: ಬಿಜೆಪಿಯ ಹಾಲಿ ಸಂಸದರಿಗೆ ಎಲ್ಲ ಎಂಟೂ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಗುವ ಪಕ್ಷದಲ್ಲಿನ ಗುಂಪುಗಾರಿಕೆ, ಕೋಲಾರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳಿಂದ ದೊರೆಯದ ಪ್ರೋತ್ಸಾಹ, ಜೆಡಿಎಸ್‌ನ ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪರ ಕೆಲಸ ಮಾಡುವುದು ಅನುಮಾನ. ಇದನ್ನೂ ಓದಿ: Dharwad Lok Sabha 2024: ಬಿಜೆಪಿ ನಾಗಾಲೋಟಕ್ಕೆ ಕಡಿವಾಣ ಹಾಕುತ್ತಾ ‘ಕೈ’?
ಜಾತಿವಾರು ಲೆಕ್ಕಾಚಾರ
ಒಕ್ಕಲಿಗ – 2.80 ಲಕ್ಷ
ಕುರುಬ – 2.70 ಲಕ್ಷ
ಭೋವಿ – 2.10 ಲಕ್ಷ
ಮುಸ್ಲಿಂ – 3.00 ಲಕ್ಷ
ಬಣಜಿಗ – 1.05 ಲಕ್ಷ
ಎಸ್ಸಿ/ಎಸ್ಟಿ – 6.10 ಲಕ್ಷ
ಇತರರು – 1.25 ಲಕ್ಷ