ಕೋಲಾರ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಕೋಲಾರದ ಐದು ಕಾಂಗ್ರೆಸ್ ಶಾಸಕರು ಬಂಡಾಯವೆದ್ದು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಬುಧವಾರ ದಿನವಿಡೀ ರಾಜ್ಯದಲ್ಲಿ ಹೈಡ್ರಾಮದ ಜೊತೆಗೆ ಹೈಕಮಾಂಡ್‌ಗೆ ಕೋಲಾರ ಕಾಂಗ್ರೆಸ್ ಆಭ್ಯರ್ಥಿ ಆಯ್ಕೆ ವಿಚಾರ ತಲೆಬಿಸಿ ತಂದಿದೆ. ಬಂಡಾಯ ಶಮನಕ್ಕೆ ಸಿಎಂ ಹಾಗೂ ಡಿಸಿಎಂ ಮುಂದಾಗಿದ್ದು, ಇಂದು ಸಂಧಾನ ಸಭೆ ನಡೆಸಲಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಆಯ್ಕೆ ಸಂಬಂಧ ದೊಡ್ಡ ಹೈಡ್ರಾಮ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಹೆಸರು ಬಹುತೇಕ ಅಂತಿಮವಾದ ಹಿನ್ನೆಲೆ ಕೋಲಾರದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಬಂಡಾಯವೆದ್ದು ರಾಜೀನಾಮೆ ನೀಡುವುದಾಗಿ ಹೇಳಿ ಹೈಡ್ರಾಮ ನಡೆಸಿದ್ದರು. ಈ ಹೊತ್ತಿನಲ್ಲಿ ತವರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದ ಸಿದ್ದರಾಮಯ್ಯ ತಕ್ಷಣ ಬಂಡಾಯ ನಾಯಕರಿಗೆ ಕರೆ ಮಾಡಿ ಮಾತುಕತೆ ನಡೆಸಿದರು. ಬಳಿಕ ಸಂಧಾನ ಮಾತುಕತೆಯ ಸೂಚನೆ ನೀಡಿದ್ದರು.
Advertisement
Advertisement
ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಕುಟುಂಬಕ್ಕೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದೆಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದರಲ್ಲಿ ಪ್ರಮುಖವಾಗಿ ಚಿಂತಾಮಣಿಯ ಸಚಿವರಾದ ಡಾ. ಎಂ.ಸಿ.ಸುಧಾಕರ್ ಸೇರಿದಂತೆ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹಮದ್, ಅನಿಲ್ ಕುಮಾರ್ ಅವರು ತಮ್ಮ ರಾಜೀನಾಮೆ ಪತ್ರಗಳನ್ನು ಹಿಡಿದು ಸ್ಪೀಕರ್ ಅವರಿಗೆ ನೀಡಲು ಮುಂದಾದ ಘಟನೆಯೂ ನಡೆದಿದೆ.
Advertisement
ಸ್ಪೀಕರ್ ಯು.ಟಿ.ಖಾದರ್ ಮಂಗಳೂರಿನಲ್ಲಿದ್ದ ಕಾರಣ ಶಾಸಕರು ಫ್ಲೈಟ್‌ನಲ್ಲಿ ಮಂಗಳೂರಿಗೆ ಹೋಗಿ ರಾಜೀನಾಮೆ ನೀಡಲು ಮುಂದಾಗಿದ್ದರು. ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರು ತಮ್ಮ ಮನೆಗೆ ಕೆರೆಸಿಕೊಂಡು ಶಾಸಕರ ಮನವೊಲಿಕೆಗೆ ಪ್ರಯತ್ನ ಪಟ್ಟರು. ಇದಕ್ಕೆ ಜಗ್ಗದ ಶಾಸಕರು ವಿಧಾನಸೌಧಕ್ಕೆ ಬಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದರು. ಈ ಮಧ್ಯೆ ಹೈಕಮಾಂಡ್ ಮಧ್ಯೆ ಪ್ರವೇಶ ಮಾಡಿ ಟಿಕೆಟ್ ಇನ್ನೂ ಯಾರಿಗೂ ಘೋಷಣೆಯಾಗಿಲ್ಲ. ಅಲ್ಲಿಯವರೆಗೂ ಎಲ್ಲರೂ ಸಮಾಧಾನವಾಗಿ ಇರುವಂತೆ ತಿಳಿಸಿದ ಮೇಲೆ ರಾಜೀನಾಮೆ ಪ್ರಹಸನಕ್ಕೆ ಶಾಸಕರು ತೆರೆ ಎಳೆದಿದ್ದಾರೆ. ನಮ್ಮಲ್ಲಿ ಯಾವುದೇ ಗುಂಪು, ಭಿನ್ನಮತ ಇಲ್ಲ ಎಂಬುದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಾತು.
Advertisement
ಕೋಲಾರ ಲೋಕಸಭಾ ಕಾಂಗ್ರೆಸ್ ಟಿಕೆಟ್‌ಗೆ ಸಂಬಂಧಿಸಿದಂತೆ ಕಳೆದ ಹದಿನೈದು ದಿನಗಳಿಂದ ಹೈಕಮಾಂಡ್‌ಗೆ ತಲೆಬಿಸಿ ಮಾಡಿತು. ಕೋಲಾರದ ಬಣ ರಾಜಕೀಯದಿಂದ ಟಿಕೆಟ್ ವಿಷಯಕ್ಕೆ ಹಗ್ಗಜಗ್ಗಾಟ ನಡೆಯುತ್ತಲೇ ಬರುತ್ತಿತ್ತು. ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ನಡುವೆ ದೊಡ್ಡ ಫೈಟ್ ನಡೆಯುತ್ತಲೇ ಬರುತ್ತಿದೆ. ಕೆ.ಹೆಚ್.ಮುನಿಯಪ್ಪ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ.
ಇದರಿಂದ ಆತಂಕಗೊಂಡ ಹೈಕಮಾಂಡ್ ಕೂಡಲೇ ಆಭ್ಯರ್ಥಿ ಆಯ್ಕೆ ವಿಚಾರವನ್ನು ತಡೆ ಹಿಡಿದಿದ್ದಾರೆ. ಇನ್ನು ನಿನ್ನೆ ರಾತ್ರಿ 10 ಗಂಟೆಗೆ ಬಂಡಾಯ ಶಾಸಕರ ಜೊತೆ ಮಾತನಾಡಲು ಸಭೆಯನ್ನು ಕರೆದಿದ್ದ ಸಿಎಂ ಸಿದ್ದರಾಮಯ್ಯ ಮೈಸೂರಿನಿಂದ ಬಾರದ ಕಾರಣ ಸಭೆ ಇಂದು (ಗುರುವಾರ) ನಡೆಯಲಿದೆ. ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟಗೊಳ್ಳಲಿದೆ. ಯಾವುದೇ ಬಣಕ್ಕೂ ನೀಡಿದರೂ ಬಂಡಾಯ ಖಚಿತವೆನ್ನುತ್ತಿದೆ ಕೋಲಾರ ಬಣ ರಾಜಕೀಯ.