ಎತ್ತಿನ ಹೊಳೆಗೂ ದಕ್ಷಿಣ ಕನ್ನಡದ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ – ರಮೇಶ್ ಕುಮಾರ್

Public TV
1 Min Read
ramesh kumar

ಕೋಲಾರ: ಎತ್ತಿನ ಹೊಳೆ ನೀರಿನ ಯೋಜನೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ನೀರಿ ಸಮಸ್ಯೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ.

ಇಂದು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆಗೂ ಮಂಗಳೂರು ಹಾಗೂ ಧರ್ಮಸ್ಥಳದಲ್ಲಿ ಇರುವ ನೀರಿನ ಸಮಸ್ಯೆಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎತ್ತಿನ ಹೊಳೆ ಯೋಜನೆ ವೇಗವಾಗಿ ಸಾಗುತ್ತಿದ್ದು, ಜೂ.12 ರಂದು ಬಯಲುಸೀಮೆಯ ಎಲ್ಲಾ ಶಾಸಕರು ಕಾಮಗಾರಿಯನ್ನು ಪರಿಶೀಲನೆ ಮಾಡಲಿದ್ದಾರೆ. ಮಂಗಳೂರಲ್ಲಿ ನೀರಿನ ಸಮಸ್ಯೆಗೂ ಎತ್ತಿನ ಹೊಳೆಗೂ ಸಂಬಂಧವಿಲ್ಲ ಕೆಲವರು ಬೇಕಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಮಾಡುವರು ನಮ್ಮ ವಿರೋಧಿಗಳಲ್ಲ. ಅವರೆಲ್ಲ ನಮ್ಮ ಅಣ್ಣ ತಮ್ಮಂದಿರು ಅವರಿಗೆ ನಮ್ಮ ಸಮಸ್ಯೆ ಕುರಿತು ಮನವರಿಕೆ ಮಾಡಲಾಗುವುದೆಂದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

netravati

ಆಕಾಶದಿಂದ ಬೀಳುವ ನೀರು ಪಶ್ಚಿಮಘಟ್ಟಗಳ ಮೂಲಕ ಅರಬ್ಬಿ ಸಮುದ್ರಕ್ಕೆ ಸೇರುತಿತ್ತು. 65 ವರ್ಷಗಳ ಇತಿಹಾಸದ ಅಂಕಿ ಅಂಶಗಳ ಪ್ರಕಾರ ಸಕಲೇಶಪುರದ ಕೆಂಪುಹೊಳೆ, ವಾಟೆ ಹೊಳೆ, ಹೊಸ ಹೊಳೆ ಸೇರಿದಂತೆ 7 ಹೊಳೆಗಳಿದ್ದು, ಇಲ್ಲಿ ಸುಮಾರು 400 ರಿಂದ 450 ಟಿಎಂಸಿ ನೀರು ಹರಿದು ಪ್ರತಿ ವರ್ಷ ಅರಬ್ಬಿ ಸಮುದ್ರ ಸೇರುತ್ತಿದೆ. ಇಲ್ಲಿ ಸಣ್ಣದಾದ ಗೋಡೆಯನ್ನು ನಿರ್ಮಿಸಿ 24 ಟಿಎಂಸಿ ನೀರನ್ನು ಬಯಲುಸೀಮೆ ಪ್ರದೇಶಗಳಿಗೆ ಹರಿಸುವುದೇ ಎತ್ತಿನಹೊಳೆ ಯೋಜನೆ ಉದ್ದೇಶ ಎಂದರು.

arabian sea

ಈ ವಿಚಾರದ ಬಗ್ಗೆ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ಶಾಸಕರುಗಳಿಗೆ ಚಿಕ್ಕ ಆಕ್ಷೇಪವಿತ್ತು. ಅದನ್ನು ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

Share This Article