ಕೋಲಾರ: ಎರಡು ವರ್ಷ ಏನು ಮಾಡುತ್ತಿದ್ರಿ ಎಂದು ಕೆಜಿಎಫ್ ನಿವಾಸಿಗಳು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪುತ್ರಿ, ಶಾಸಕಿ ರೂಪಕಲಾ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಕೆಜಿಎಫ್ ನಗರಸಭೆ ಚುನಾವಣೆ ನವೆಂಬರ್ 12ರಂದು ನಡೆಯಲಿದೆ. ಹೀಗಾಗಿ ಶಾಸಕಿ ರೂಪಕಲಾ ಅವರು ಕಾಂಗ್ರೆಸ್ ಅಭ್ಯರ್ಥಿ ಸೇಂದಿಲ್ ಪರ ಪ್ರಚಾರ ಮಾಡಲು 30ನೇ ವಾರ್ಡ್ ಗೆ ಶನಿವಾರ ಸಂಜೆ ಬಂದಿದ್ದರು. ಈ ವೇಳೆ ಸ್ಥಳೀಯರು ಶಾಸಕರನ್ನು ಸುತ್ತುವರಿದು ಪ್ರಶ್ನೆಗಳ ಸುರಿಮಳೆ ಸುರಿಸಿದರು. ಇದಕ್ಕೆ ಉತ್ತರಿಸಲು ಸಾಧ್ಯವಾಗದೆ ರೂಪಕಲಾ ಫಜೀತಿಗೆ ಸಿಲುಕಿದರು.
ಎರಡು ವರ್ಷಗಳ ಬಳಿಕ ಮತ ಕೇಳುವುದಕ್ಕೆ ಬಂದಿದ್ದೀರ. ಇಲ್ಲಿವರೆಗೂ ಏನು ಮಾಡುತ್ತಿದ್ರಿ? ಸ್ತ್ರೀ ಶಕ್ತಿ ಸಂಘದ ಸಾಲ ಮನ್ನಾ ಮಾಡುತ್ತೇನೆ ಅಂತ ಭರವಸೆ ನೀಡಿದ್ರಿ. ನಿಮ್ಮ ಭರವಸೆ ಮಾತ್ರ ಹಾಗೆ ಉಳಿದಿದೆ. ವಿಧಾನಸಭಾ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸಿರುವವರಿಗೆ ಕೈ ಕೊಟ್ಟು, ಇನ್ನೊಬ್ಬರಿಗೆ ಟಿಕೆಟ್ ಕೊಟ್ಟಿದ್ದೀರ. ನೀವು ನಮ್ಮ ವಾರ್ಡ್ ನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಮಹಿಳೆಯರು, ಪುರುಷರು ತರಾಟೆ ತೆಗೆದುಕೊಂಡರು.
ಕುಡಿಯುವುದಕ್ಕೆ ನೀರಿಲ್ಲ, ಶಾಲೆ ಕಟ್ಟಡ ಬಿದ್ದು ಹೋಗಿವೆ. ಮಕ್ಕಳು ಭಯದಲ್ಲಿ ಪಾಠ ಕೇಳುತ್ತಿವೆ. ಇದನ್ನೆಲ್ಲ ನೋಡಿದರೆ ನಮ್ಮ ವಾರ್ಡ್ ಗೆ ಶಾಲೆ ಬೇಡವೇ ಬೇಡ ಎನ್ನುವಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ಹೊರ ಹಾಕಿದರು.
ಜನರ ಸಮಸ್ಯೆಗೆ ಸ್ಪಂದಿಸಿದ ಶಾಸಕಿ ರೂಪಕಲಾ ಅವರು, ನನ್ನಿಂದ ಸಣ್ಣ-ಪುಟ್ಟ ಲೋಪದೋಷವಾಗಿದೆ. ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ. ನಾನು ಶಾಸಕಿಯಾಗಿ ಆಯ್ಕೆಯಾಗಿ ಒಂದೂವರೆ ವರ್ಷವಾಗಿದೆ. ನಿತ್ಯವೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಸಮಾಧಾನ ಮಾಡಲು ಯತ್ನಿಸಿದರು. ಆದರೆ ಇದಕ್ಕೆ ಜಗ್ಗದ ಸಾರ್ವಜನಿಕರು ಪ್ರಶ್ನೆಗಳ ಸುರಿಮಳೆ ಸುರಿಸಿದರು. ಇದಕ್ಕೆ ಉತ್ತರಿಸಲಾಗದೆ ಶಾಸಕಿ ರೂಪಕಲಾ ಅವರು ಸಾರ್ವಜನಿಕರಿಗೆ ಕೈ ಮುಗಿದು ಅಲ್ಲಿಂದ ಹೊರಟು ಹೋದರು.