ಕೋಲಾರ: ರಾಜ್ಯದಲ್ಲಿ ಮೂಢನಂಬಿಕೆ ನಿಷೇಧ ಕಾಯ್ದೆಯನ್ನ ಜಾರಿ ಮಾಡಿದ್ರೂ ಸಹ ದೇವರ ಹೆಸರಿನಲ್ಲಿ ಭಯಾನಕ ಆಚರಣೆಗಳು ನಡೆಯುವುದು ಮಾತ್ರ ತಪ್ಪಿಲ್ಲ. ಗಡಿ ಜಿಲ್ಲೆ ಕೋಲಾರದ ಕೆಜಿಎಫ್ ನಗರದ ಚಾಂಪಿಯನ್ ರೀಫ್ ನಲ್ಲಿ ಕಾಳಿ ಆರಾಧಕರು ನಡೆಸುವ ನರಕಾಸುರ ಸಂಹಾರ ಆಚರಣೆ ನಿಜಕ್ಕೂ ನಾಗರಿಕರು ಭಯಪಡುವಂತಹದ್ದು. ಈ ಆಚರಣೆ ದೇವರ ಮೇಲಿರುವ ಜನರ ನಂಬಿಕೆಯನ್ನ ಭಯಕ್ಕೆ ತಿರುಗಿಸುತ್ತದೆ.
Advertisement
ಮಹಾಶಿವರಾತ್ರಿಯ ನಂತರದ ಮೊದಲ ಅಮಾವಾಸ್ಯೆಯಂದು ಕಾಳಿ ಆರಾಧಕರು ದೇವಿಯನ್ನು ಒಲಿಸಿಕೊಳ್ಳುವ ಸಲುವಾಗಿ ಮಾಡುವ ಸ್ಮಶಾನದಲ್ಲಿ ನರಕಾಸುರ ಸಂಹಾರ ಎಂಬ ವಿಶೇಷ ಆಚರಣೆ ಮಾಡುತ್ತಾರೆ. ಈ ದಿನದಂದು ಕಾಳಿ ಆರಾಧಕ ಕಾಳಿವೇಷಧಾರಿ ಮದನ್, ನರಕಾಸುರ ಪ್ರತಿಕೃತಿ ಮೇಲೆ ನೃತ್ಯ ಮಾಡುತ್ತಾ, ಥೇಟ್ ನರಕಾಸುರನ ಹೊಟ್ಟೆ ಬಗೆಯುವ ರೀತಿ ಮಾಡುತ್ತಾರೆ.
Advertisement
ಈ ವೇಳೆ ಕಪ್ಪುಬಣ್ಣದ ಜೀವಂತ ಮೇಕೆ ಕತ್ತು ಕತ್ತರಿಸಿ ಭಯಾನಕ ರೀತಿಯಲ್ಲಿ ಬಿಸಿ ಬಿಸಿ ರಕ್ತವನ್ನು ಕಾಳಿ ವೇಷಧಾರಿ ಕುಡಿಯುತ್ತಾರೆ. ಜೊತೆಗೆ ಕೋಳಿಯ ಕತ್ತನ್ನು ಬಾಯಿಂದ ಕಚ್ಚಿ ಎಸೆದು ರಕ್ತ ಹೀರುತ್ತಾನೆ, ಈ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸುತ್ತಿವೆ.
Advertisement
Advertisement
ಇದು ಭಕ್ತರ ಪಾಲಿಗೆ ಸಂಪ್ರದಾಯ, ಭಕ್ತಿ. ಆದರೆ ಇಂತಹ ಆಚರಣೆಗಳಿಗೆ ನಮ್ಮ ರಾಜ್ಯದಲ್ಲಿ ಅವಕಾಶವಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ರೂಪಿಸಲಾಗಿದ್ದ ಮಾಟ, ಮಂತ್ರ ಮತ್ತು ವಾಮಾಚಾರ ನಿಯಂತ್ರಿಸುವ ಮಸೂದೆ- 2017ನ್ನು ಬಿಎಸ್‍ವೈ ಸರ್ಕಾರ ಜನವರಿ 4 ರಿಂದಲೇ ಜಾರಿಗೆ ತಂದಿದೆ. ಆದರೂ ಇಂತಹ ಆಚರಣೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಪೊಲೀಸರು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಸರ್ಕಾರದ ಮೌಢ್ಯ ನಿಷೇಧ ಕಾಯ್ದೆ ಕೇವಲ ಕಾಗದಕ್ಕೆ ಮಾತ್ರ ಸೀಮಿತವಾದಂತಿದೆ. ಸಂಬಂಧ ಪಟ್ಟವರು ಇಂತಹ ಮೌಢ್ಯಾಚರಣೆಗಳಿಗೆ ಕಡಿವಾಣ ಹಾಕಬೇಕಿದೆ.