ಕೆಜಿಎಫ್-2 ಚಿತ್ರೀಕರಣಕ್ಕೆ ಕೋರ್ಟ್ ತಡೆಯಾಜ್ಞೆ – ಅರ್ಜಿದಾರನ ವಿರುದ್ಧ ಸ್ಥಳೀಯರ ಪ್ರತಿಭಟನೆ

Public TV
1 Min Read
collage kgf 2

ಕೋಲಾರ: ಕೆಜಿಎಫ್-2 ಸಿನಿಮಾ ಚಿತ್ರೀಕರಣಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಅರ್ಜಿದಾರ ಶ್ರೀನಿವಾಸ್ ವಿರುದ್ಧ ಸ್ಥಳೀಯರು ಪ್ರತಿಭಟನೆ ಮಾಡಿದ್ದಾರೆ.

ಶ್ರೀನಿವಾಸ್ ಎಂಬುವವರು ಸಿನಿಮಾ ಚಿತ್ರೀಕರಣದಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೆಜಿಎಫ್‍ನ ಜೆಎಂಎಫ್‍ಸಿ ಕೋರ್ಟ್ ಮಂಗಳವಾರ ಸಿನಿಮಾ ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಿತ್ತು.

kgf2 main

ಚಿತ್ರೀಕರಣದಿಂದ ನಮಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಬದಲಾಗಿ ನಮ್ಮ ದೈನಂದಿನ ಜೀವನ ಸಾಗುತಿತ್ತು ಎಂದು ಸ್ಥಳೀಯರು ಅರ್ಜಿದಾರನ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

ಕೆಜಿಎಫ್‍ನಲ್ಲಿ ಚಿನ್ನದ ಗಣಿ ಸ್ಥಗಿತದಿಂದ ಜೀವನ ಸಾಗಿಸಲು ಕಷ್ಟವಾಗುತ್ತಿತ್ತು. ಆದರೆ ಕೆಜಿಎಫ್-2 ಚಿತ್ರೀಕರಣದಿಂದ ಸ್ಥಳೀಯರಿಗೆ ಕೆಲಸ ಸಿಕ್ಕಿದೆ. ಇದರಿಂದ ನಮಗೆ ಯಾವುದೇ ತೊಂದರೆಯಾಗಿಲ್ಲ. ಪರಿಸರ ಹಾಳಾಗುತ್ತಿದೆ ಎಂದು ಅರ್ಜಿದಾರ ಶ್ರೀನಿವಾಸ್ ಕೋರ್ಟಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಹಾಗಾಗಿ ಕೋರ್ಟ್ ಮತ್ತೊಮ್ಮೆ ಪರಿಶೀಲನೆ ನಡೆಸಿ ಚಿತ್ರೀಕರಣಕ್ಕೆ ಅನುಮತಿ ನೀಡಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.

KGF 3

ಏನಿದು ಪ್ರಕರಣ?
ಕೋಲಾರ ಜಿಲ್ಲೆಯ ಕೆಜಿಎಫ್‍ನ ಕೆನಡೀಸ್ ಸೈನೈಡ್ ಗುಡ್ಡದ ಮೇಲೆ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ದುಬಾರಿಯ ಸೆಟ್ ಹಾಕಲಾಗಿದೆ. ಆದರೆ ಶ್ರೀನಿವಾಸ್ ಎಂಬವರು ಪರಿಸರ ಹಾನಿ ಹಾಗೂ ಚಿತ್ರೀಕರಣದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಕೆಜಿಎಫ್ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿದಾರರ ವಾದ ಪುರಸ್ಕರಿಸಿ ಕೋರ್ಟ್ ಶೂಟಿಂಗ್ ನಡೆಸಲು ತಡೆಯಾಜ್ಞೆ ನೀಡಿತ್ತು.

Share This Article