ಡಿಕೆಶಿ ನನ್ನ ರಾಜಕೀಯ ಗುರು, ಅವರಿಗೆ ದೈವ ಶಕ್ತಿ ಇದೆ – ಎಚ್.ನಾಗೇಶ್

Public TV
1 Min Read
h. nagesh

ಕೋಲಾರ: ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು ನನ್ನ ರಾಜಕೀಯ ಗುರುಗಳು ಅವರಿಗೆ ದೇವರು ಒಳ್ಳೆಯದು ಮಾಡುತ್ತಾನೆ. ಅವರಿಗೆ ದೈವ ಶಕ್ತಿ ಇದೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.

ನೂತನ ಸಚಿವರಾದ ನಂತರ ಕೋಲಾರದ ಮುಳಬಾಗಲಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲಾ ದೇವರುಗಳ ಆಶೀರ್ವಾದ ಇದೆ. ಆ ದೈವ ಬಲದಿಂದ ಮುಂದೆ ಅವರಿಗೆ ಒಳ್ಳೆಯದಾಗುತ್ತದೆ ಎಂದು ಭವಿಷ್ಯ ನುಡಿದರು.

D K Shivakumar

ಡಿಕೆಶಿ ಅವರ ಮೇಲೆ ಇರುವ ಆರೋಪವನ್ನು ನಾನು ನಂಬುವುದಿಲ್ಲ. ವಿಚಾರಣೆ ಮುಗಿಯುವವರೆಗೂ ಊಹಾಪೋಹಗಳು ಇದ್ದೇ ಇರುತ್ತವೆ. ತನಿಖೆಯ ನಂತರ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ಸಿಗುತ್ತದೆ. ಡಿ.ಕೆ.ಶಿವಕುಮಾರ್ ಅವರು ನನಗೆ ರಾಜಕೀಯ ಗುರುಗಳು, ದೇವರು ಜೊತೆಗೆ ಗಾಡ್ ಫಾದರ್ ಎಲ್ಲವೂ ಆಗಿದ್ದವರು. ಕಷ್ಟದಲ್ಲಿರುವಾಗ ಅವರ ಬಗ್ಗೆ ಟೀಕೆ ಮಾಡುವುದು ಸುಲಭ, ಅವರ ವೈಯುಕ್ತಿಕ ವಿಚಾರಗಳ ಕುರಿತು ಕಷ್ಟದಲ್ಲಿದ್ದಾಗ ಮಾತನಾಡಬಾರದು ಎಂದು ಹೇಳಿದರು.

ಒಂದು ವೇಳೆ ಶಿವಕುಮಾರ್ ಅವರು ಜೈಲಿಗೆ ಹೋದರೆ ನಾನು ಏನು ಮಾಡುವುದಕ್ಕೆ ಆಗುವುದಿಲ್ಲ. ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಅಷ್ಟೇ ಎಂದರು. ಅಬಕಾರಿ ಇಲಾಖೆಯಲ್ಲಿ ಹೊಸ ಲೈಸೆನ್ಸ್ ಗಳಿಗೆ ಬಹಳ ಬೇಡಿಕೆ ಇದೆ, ಹೀಗಾಗಿ ಮತ್ತಷ್ಟು ಲೈಸೆನ್ಸ್ ಗಳನ್ನು ಕೊಡುವ ವಿಚಾರವನ್ನು ಮುಖ್ಯಮಂತ್ರಿಗಳ ಬಳಿ ಮಾತನಾಡಿ ತೀರ್ಮಾನ ತೆಗೆದುಕೊಳ್ಳುವೆ ಎಂದು ತಿಳಿಸಿದರು.

bsy home

ಅದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಆಡಳಿತ ವರ್ಗದಲ್ಲಿದ್ದ ನಾನು ನನ್ನ ಅನುಭವಗಳನ್ನು ಮುಖ್ಯಮಂತ್ರಿಗಳ ಬಳಿ ಹೇಳಿದ್ದೇನೆ ಎಂದ ಅವರು, ರಾಜ್ಯದಲ್ಲಿ ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟ ಸಂಪೂರ್ಣವಾಗಿ ನಿಲ್ಲಿಸುವಲ್ಲಿ ಕ್ರಮಕೈಗೊಳ್ಳುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಮುಳಬಾಗಿಲು ಪಟ್ಟಣದಲ್ಲಿ ನೂತರ ಪಶು ಆಸ್ಪತ್ರೆ ಕಟ್ಟಡ ಉದ್ಘಾಟನೆ, ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *