ಕೋಲಾರ: ಚುನಾವಣೆ ಬಳಿಕ ಬಿಸಾಡಿದ್ದ ಬಿಜೆಪಿ ಬಾವುಟಗಳನ್ನು ಟೊಮೆಟೊ ತೋಟದ ಸುತ್ತ ಕಟ್ಟಿ, ಬೆಳೆಗೆ ಹಾನಿ ಮಾಡುತ್ತಿದ್ದ ಪಕ್ಷಿಗಳ ನಿಯಂತ್ರಣ ಮಾಡುವ ವಿಭಿನ್ನ ಪ್ರಯತ್ನಕ್ಕೆ ಜಿಲ್ಲೆಯ ರೈತರೊಬ್ಬರು ಕೈ ಹಾಕಿದ್ದಾರೆ.
ಸಾಮಾನ್ಯವಾಗಿ ರೈತರು ತಾವು ಬೆಳೆದ ಬೆಳೆಗಳನ್ನ ಕಾಪಾಡಿಕೊಳ್ಳಲು ಇನ್ನಿಲ್ಲದ ಕಸರತ್ತುಗಳನ್ನ ಮಾಡುತ್ತಾರೆ. ಪ್ರಮುಖವಾಗಿ ಹಳೆ ಬಟ್ಟೆ, ಸೀರೆಗಳನ್ನ ಬೆಳೆಗಳ ಸುತ್ತ ಕಟ್ಟುವುದು, ಬಿಯರ್ ಬಾಟಲಿಗೆ ಕಲ್ಲು ಕಟ್ಟಿ ಶಬ್ದ ಮಾಡುವುದು, ಬೊಂಬೆ ನೇತಾಕುವ ಕೆಲಸ ಮಾಡುತ್ತಾರೆ. ಆದರೆ ಕೋಲಾರ ತಾಲ್ಲೂಕಿನ ನರಸಾಪುರ ಬಳಿ ರೈತ ಮುರಗೇಶ್ ಎಲೆಕ್ಷನ್ ಮುಗಿದ ನಂತರ ಸಿಕ್ಕ ಬಿಜೆಪಿ ಬಾವುಟಗಳನ್ನ ತೋಟಕ್ಕೆ ಅಳವಡಿಸಿಕೊಳ್ಳುವ ಮೂಲಕ ಬೆಳೆಗೆ ಕಾಟಕೊಡುತ್ತಿದ್ದ ಪಕ್ಷಿಗಳ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಪಕ್ಷದ ಸಭೆ ಸಮಾರಂಭ ಅಥವಾ ಗಣ್ಯರು ಆಗಮಿಸಿದ ವೇಳೆ ಹೀಗೆ ಬಾವುಟಗಳನ್ನ ಅಳವಡಿಸಿ ಕಾರ್ಯಕರ್ತರು ಸ್ವಾಗತ ಮಾಡುತ್ತಾರೆ. ಆದರೆ ಈ ರೈತ ತನ್ನ ಟೊಮೆಟೊ ತೋಟವನ್ನ ಬಿಜೆಪಿ ಮಯ ಮಾಡಿಕೊಂಡು ಬೆಳೆ ಕಾಪಾಡಿಕೊಳ್ಳುತ್ತಿದ್ದಾರೆ.
ಈ ತೋಟವನ್ನು ಒಂದು ಕ್ಷಣ ನೋಡಿದ ಜನರು ರೈತ ಬಿಜೆಪಿಯ ಭಾರೀ ಅಭಿಮಾನಿ ಇರಬೇಕು ಅದಕ್ಕೆ ತೋಟಕ್ಕೆ ಪಕ್ಷದ ಬಾವುಟಗಳನ್ನ ಕಟ್ಟಿಕೊಂಡಿದ್ದಾನೆ ಅಂದುಕೊಳ್ಳುತ್ತಾರೆ. ಆದರೆ ಇದು ಪ್ರಾಣಿ ಪಕ್ಷಿಗಳ ಹಾವಳಿ ನಿಯಂತ್ರಿಸಲು ಮಾಡಿದ ಪ್ಲಾನ್ ಎಂದು ತಿಳಿದ ಬಳಿಕ ಆಶ್ಚರ್ಯ ಪಡುತ್ತಿದ್ದಾರೆ.
ಸದ್ಯ ಇದನ್ನು ನೋಡಿದ ಸ್ಥಳೀಯ ರೈತರು,”ವಾಟ್ ಅನ್ ಐಡಿಯಾ ಫಾರ್ಮರ್ ಜೀ” ಎನ್ನುತ್ತಿದ್ದಾರೆ. ಚುನಾವಣೆಗಳಲ್ಲಿ ಕೋಟ್ಯಂತರ ರೂಪಾಯಿ ವ್ಯಯ ಮಾಡಿ, ಗೆದ್ದ ಬಳಿಕ ರೈತರಿಗಾಗಿ ಯಾವ ಪಕ್ಷದ ಯಾವ ಅಭ್ಯರ್ಥಿ ಕೆಲಸ ಮಾಡುತ್ತಾರೋ ಗೊತ್ತಿಲ್ಲ. ಆದರೆ ಚುನಾವಣೆ ಬಳಿಕ ವ್ಯರ್ಥವಾಗಿ ಬಿದ್ದಿದ್ದ ಬಾವುಟ ಮಾತ್ರ ರೈತನ ಬೆಳೆ ರಕ್ಷಣೆಗೆ ಉಪಯೋಗವಾಗಿದೆ.