ಕೋಲಾರ: ಇನ್ನೆರಡು ದಿನಗಳ ಕಾಲ ರಾಜ್ಯದಲ್ಲಿ ಫಾನಿ ಚಂಡಮಾರುತ ತನ್ನ ರುದ್ರಾವತಾರ ತೋರಿಸುವ ಮಾಹಿತಿ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಕೋಲಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಫಾನಿ ಚಂಡಮಾರುತದ ಬಗ್ಗೆ ಎಚ್ಚರ ವಹಿಸುವಂತೆ ಜಿಲ್ಲೆಯ ಜನರಿಗೆ ಸೂಚನೆ ನೀಡಿದ್ದಾರೆ. ಭಾರತದ ಹವಾಮಾನ ಇಲಾಖೆ ರವಾನಿಸಿರುವ ಸಂದೇಶದಂತೆ ಫಾನಿ ಚಂಡಮಾರುತ 100 ಕೀ.ಮೀ ವೇಗ ಪಡೆಯಲಿರುವ ಸಾಧ್ಯತೆಯಿದ್ದು, ಹವಾಮಾನ ವೈಪರೀತ್ಯ ಉಂಟಾಗಲಿದೆ. ಆದ್ದರಿಂದ ಜಿಲ್ಲೆಯ ಜನರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ತಿಳಿಸಿದೆ.
Advertisement
Advertisement
ಇಂದು ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಾಗಿ, ಬಿಸಿ ಗಾಳಿ ಬೀಸಲಿದ್ದು, ಸೋಮವಾರ ಹಾಗೂ ಮಂಗಳವಾರ ಅಂದ್ರೆ ಏಪ್ರಿಲ್ 29 ಹಾಗೂ 30 ಎರಡು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚು ಓಡಾಟ ಮಾಡಬೇಡಿ, ಆದಷ್ಟು ಸುರಕ್ಷಿತವಾಗಿ ಮನೆಗಳಲ್ಲಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅಲ್ಲದೆ ಮಿಂಚು ಸಿಡಿಲು ಸಂಭವಿಸಿದ ವೇಳೆ ಎಚ್ಚರದಿಂದಿರುವಂತೆ ಪ್ರಕಟಣೆ ಹೊರಡಿಸುವ ಮೂಲಕ ಕೋಲಾರ ಜಿಲ್ಲಾಡಳಿತ ಜಿಲ್ಲೆಯ ಜನರ ಹಿತ ಕಾಯಲು ಮುಂದಾಗಿದೆ.