ಕೋಲಾರ: ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಪಂದ್ಯಾವಳಿಯ ಸಂದರ್ಭದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಇಬ್ಬರು ಆಟಗಾರರು ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಪರಸ್ಪರ ಡಿಕ್ಕಿಯಾಗಿ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಮೈದಾನದಲ್ಲಿ ಪ್ರಜ್ಞೆ ಕಳೆದುಕೊಂಡ ಆಟಗಾರರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿಯಲ್ಲಿ ಇಂದು ನಡೆದಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಘಟನೆ ನಡೆದಿದೆ. ಬ್ಯಾಟ್ಸ್ ಮನ್ ಸಿಡಿಸಿದ ಚೆಂಡನ್ನು ಕ್ಯಾಚ್ ಹಿಡಿಯಲು ಹೋದ ಸಂದರ್ಭದಲ್ಲಿ ಡೀಪ್ ಸ್ಕ್ವೇರ್ ಲೇಗ್ ಹಾಗೂ ಡೀಪ್ ಮೀಡ್ ವಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಭಾನು ಪ್ರಕಾಶ್, ಶ್ರೀನಿವಾಸ್ ಕ್ಯಾಚ್ ಹಿಡಿಯಲು ಯತ್ನಿಸಿದ್ದರು. ಈ ವೇಳೆ ಆಟಗಾರ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಕ್ಷಣ ಮಾತ್ರದಲ್ಲಿ ಇಬ್ಬರು ಮೈದಾನದಲ್ಲೇ ಪ್ರಜ್ಞೆ ತಪ್ಪಿಬಿದ್ದಿದ್ದರು.
ಇಬ್ಬರು ಆಟಗಾರರು ಪ್ರಜ್ಞೆ ಕಳೆದುಕೊಂಡ ಕಾರಣ ಸಹ ಆಟಗಾರಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೂಡಲೇ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಪಡೆದ ಬಳಿಕ ಶ್ರೀನಿವಾಸ್ ಚೇತರಿಕೆ ಕಂಡಿದ್ದು, ಭಾನು ಪ್ರಕಾಶ್‍ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಟದ ವೇಳೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೂರ್ನಿಯನ್ನು ವೆಬ್ ಚಾನಲ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿತ್ತು. ಟೂರ್ನಿಯಲ್ಲಿ ರೈಸಿಂಗ್ ಸ್ಟಾರ್ಸ್ ಹಾಗೂ ಎಸ್‍ಎಎಸ್ ಕ್ರಿಕೆಟರ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಭಾನು ಹಾಗೂ ಶ್ರೀನಿವಾಸ್ ರೈಸಿಂಗ್ ಸ್ಟಾರ್ಸ್ ತಂಡದ ಪರ ಆಡುತ್ತಿದ್ದರು.