ಮುನಿಯಪ್ಪ ವಿರುದ್ಧ ಬಂಡಾಯ – ದೆಹಲಿಗೆ ದೂರು ಕೊಟ್ಟ ಕೋಲಾರ ಕೈ ಶಾಸಕರು

Public TV
2 Min Read
KH MUNIYAPPA

ಕೋಲಾರ: ಏಳು ಬಾರಿ ಕೋಲಾರ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಸಂಸದ ಕೆಎಚ್ ಮುನಿಯಪ್ಪ ಅವರಿಗೆ ಈ ಬಾರಿ ಸ್ವಪಕ್ಷಿಯ ಶಾಸಕರೇ ಟಿಕೆಟ್ ನೀಡದಂತೆ ಬಂಡಾಯ ಹೂಡಿದ್ದಾರೆ. ಜಿಲ್ಲೆಯ ನಾಲ್ಕು ಜನ ಕಾಂಗ್ರೆಸ್ ಶಾಸಕರು, ಸ್ವಾತಂತ್ರ್ಯ ಅಭ್ಯರ್ಥಿ ಸೇರಿದಂತೆ ಹಲವು ಮುಖಂಡರು ಹಾಲಿ ಸಂಸದ ಮುನಿಯಪ್ಪ ಅವರಿಗೆ ಟಿಕೆಟ್ ನೀಡದಂತೆ ದೆಹಲಿ ಹೈಕಮಾಂಡ್‍ಗೆ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ ಘೋಷಣೆ ಆಗುತ್ತಿದಂತೆ ಜಿಲ್ಲೆಯ ರಾಜಕಾರಣ ರಂಗೇರಿದ್ದು, ಮುನಿಯಪ್ಪ ಅವರ ವಿರೋಧಿ ಬಣದ ಜಿಲ್ಲೆಯ ನಾಯಕರು ಪಕ್ಷಾತೀತವಾಗಿ ಒಂದಾಗಿದ್ದಾರೆ. ಅಲ್ಲದೇ ಅವರಿಗೆ ಟಿಕೆಟ್ ತಪ್ಪಿಸಲು ಸ್ವಪಕ್ಷಿಯವರೇ ಅಖಾಡಕ್ಕೆ ಇಳಿದಿದ್ದು, ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ.

KH MUNIYAPPA KLR

ವಿಶೇಷತೆ ಎಂದರೆ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿ, ಶಿಢ್ಲಘಟ್ಟ ಶಾಸಕ ವಿ.ಮುನಿಯಪ್ಪ, ಮುಳಬಾಗಲು ಪಕ್ಷೇತರ ಶಾಸಕ ಎಚ್.ನಾಗೇಶ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮುನಿಯಪ್ಪಗೆ ಬಿಸಿ ತುಪ್ಪವಾಗ ಪರಿಣಮಿಸಿದ್ದಾರೆ. ಈಗಾಗಲೇ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಈ ಬಾರಿ ಕೆ.ಎಚ್ ಮುನಿಯಪ್ಪಗೆ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ವಿರೋಧ ಇರುವುದರಿಂದ ಇವರ ಬದಲಿಗೆ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಕೋಲಾರದಿಂದ ಟಿಕೆಟ್ ನೀಡಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸಮ್ಮಿಶ್ರ ಸರ್ಕಾರ ಮೈತ್ರಿ ಧರ್ಮದಂತೆ ಕೋಲಾರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಪಾಲಾಗಿದ್ದು, ಹಾಲಿ ಸಂಸದರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಎಂದಿನಂತೆ ಹೈಕಮಾಂಡ್‍ನಿಂದ ತಮ್ಮ ಹೆಸರು ಶಿಫಾರಸ್ಸು ಮಾಡಿಕೊಂಡು ಬಂದು ತಮ್ಮ ವಿರೋಧಿಗಳಿಗೆ ಟಾಂಗ್ ಕೊಡಲು ಸಂಸದರು ದೆಹಲಿ ಸೇರಿದಂತೆ ಬೆಂಗಳೂರಿನಲ್ಲಿ ಠಿಕ್ಕಾಣಿ ಹೂಡಿದ್ದಾರೆ.

RAMESH KUMAR

ಇತ್ತ ಸಂಸದರ ವಿರುದ್ಧ ಕ್ಷೇತ್ರದಲ್ಲಿ ಸೇರಿದಂತೆ ಬೆಂಗಳೂರಿನ ಅಶೋಕ ಹೋಟೆಲ್‍ನಲ್ಲಿ ಕೆ.ಹೆಚ್ ಹಠಾವೋ ಕೋಲಾರ ಬಚಾವೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿಂದುಳಿದ ವರ್ಗಗಳ ಮುಖಂಡರು ಇತ್ತೀಚಿಗೆ ಪರೋಕ್ಷವಾಗಿ ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಅಭಿನಂದನಾ ಸಮಾರಂಭದ ಹೆಸರಿನಲ್ಲಿ ಮುನಿಯಪ್ಪರ ರಾಜಕೀಯ ವಿರೋಧಿಗಳನ್ನು ಒಟ್ಟುಗೂಡಿಸಿ ಬಹಿರಂಗವಾಗಿ ವಿರೋಧಿ ಬಣ ತಯಾರಿ ನಡೆಸಿತ್ತು. ಆದರೆ ಎಲ್ಲೂ ವಿರೋಧಿ ನಾಯಕರ ವಿರುದ್ಧ ಮಾತನಾಡದ ಮುನಿಯಪ್ಪ ತಮ್ಮದೇ ಶೈಲಿಯಲ್ಲಿ ಲೋಕಸಭೆ ಚುನಾವಣೆ ತಯಾರಿ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಚುನಾವಣೆ ಬಂದಾಗ ಇವೆಲ್ಲಾ ಸಹಜ, ಅವರು ಯಾರು ಕೂಡ ನಮ್ಮ ವಿರೋಧಿಗಳಲ್ಲ ಎಂದು ಮೃದು ಮಾತನಾಡಿದ್ದಾರೆ. ಕಳೆದ ಏಳು ಚುನಾವಣೆಗಳಲ್ಲಿ ವಿರೋಧಿಗಳನ್ನು ಕಟ್ಟಿ ಹಾಕಿ, ಭಿನ್ನಾಭಿಪ್ರಾಯ, ಬಂಡಾಯ, ಹೋರಾಟಗಳ ಶಮನ ಮಾಡುವ ತಂತ್ರಗಳಲ್ಲಿಂದಲೇ ಜಯಗಳಿಸಿರುವ ಮುನಿಯಪ್ಪ ಅವರಿಗೆ ಇದು ಸಾಮಾನ್ಯ ಎಂಬಂತೆ ಆಗಿದೆ. ಆದರೆ ಬಾರಿ ಸ್ವಪಕ್ಷಿಯರೇ ಆಗಿರುವ ಬಂಡಾಯ ಶಾಸಕರನ್ನು ಹೇಗೆ ನಿಭಾಯಿಸುತ್ತಾರೆ ಎಂಬುವುದು ಮಾತ್ರ ಕುತೂಹಲವಾಗಿದೆ.

KH MUNIYAPPA KLR r

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *