ಕೋಲಾರ: ಬೆಳಗ್ಗೆ ಕಾಣೆಯಾಗಿದ್ದ ಹೆಣ್ಣು ಮಗುವೊಂದು ಮಧ್ಯಾಹ್ನ ಶವವಾಗಿ ಪತ್ತೆಯಾದ ಘಟನೆ ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಛತ್ರಕೋಡಿಹಳ್ಳಿ ಗ್ರಾಮದ ರಘುಪತಿ ಹಾಗೂ ಹರ್ಷಿತಾ ದಂಪತಿಯ ಒಂದೂವರೆ ತಿಂಗಳ ಹೆಣ್ಣು ಮಗು ಶವವಾಗಿ ಪತ್ತೆಯಾಗಿದೆ. ಪೋಷಕರೇ ಮಗುವನ್ನು ಕೊಲೆ ಮಾಡಿ, ಕಾಣೆಯಾಗಿದೆ ಎಂದು ಕಥೆ ಕಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Advertisement
Advertisement
ಮಗು ಕಾಣೆಯಾಗಿದೆ ಎಂದು ರಘುಪತಿ ದಂಪತಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಇಲಾಖೆ, ಮಕ್ಕಳ ರಕ್ಷಣಾ ಘಟಕ ಮಗುವಿನ ಹುಡುಕಾಟದಲ್ಲಿ ತೊಡಗಿದ್ದರು. ಮಗುವಿನ ಸುಳಿವೇ ಸಿಗದಿದ್ದಾಗ ನಾಯಿ ಅಥವಾ ಕೋತಿಗಳೇನಾದರು ಹೊತ್ತೊಯ್ದಿರಬೇಕು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಊರು ಕೇರಿ, ಮನೆ ಮಠ ಎಲ್ಲೆಡೆ ಹುಡಕಾಡಿದ್ದರು.
Advertisement
ಮಧ್ಯಾಹ್ನವಾದರೂ ಮಗುವಿನ ಸುಳಿವು ಸಿಕ್ಕಿರಲಿಲ್ಲ. ಸ್ಥಳಕ್ಕೆ ಬಂದ ಎಸ್‍ಪಿ ಕಾರ್ತಿಕ್ ರೆಡ್ಡಿ ಅವರು ಕೂಡ ಪರಿಶೀಲನೆ ನಡೆಸಿದರು. ನಂತರ ಶ್ವಾನದಳ ಕರೆಸಿ ಪರಿಶೀಲನೆ ನಡೆಸಿದಾಗ ಮನೆಯಲ್ಲಿನ ನೀರಿನ ಸಂಪ್ ಬಳಿ ನಾಯಿ ಗಿರಿಕಿ ಹೊಡೆಯುತ್ತಿತ್ತು. ಅನುಮಾನ ಬಂದು ಸಂಪ್ ಒಳಗೆ ನೋಡಿದಾಗ ಮಗುವಿನ ಶವ ಪತ್ತೆಯಾಗಿತ್ತು.
Advertisement
ಹೆಣ್ಣು ಮಗು ಬೇಡವಾಗಿದ್ದರಿಂದ ಪೋಷಕರೇ ಮಗುವನ್ನು ಸಂಪ್‍ನಲ್ಲಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತ ಮಗುವಿನ ದೊಡ್ಡಪ್ಪ, ‘ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಮಗೆ ಹಣ್ಣು ಮಗು ಅಂದ್ರೆ ತುಂಬಾ ಇಷ್ಟ. ನನ್ನ ತಮ್ಮನಿಗಿದ್ದ ಹೆಣ್ಣು ಮಗು ಈಗ ಇಲ್ಲವಾಗಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.
ಮಗುವಿನ ಕೊಲೆಗೆ ನಿಖರ ಕಾರಣವಾದರು ಏನು? ಮಗುವನ್ನು ಸಂಪ್‍ಗೆ ಹಾಕಿ ಇಷ್ಟೆಲ್ಲಾ ಹೈಡ್ರಾಮಾ ಸೃಷ್ಟಿಸಿದ್ದಾದರೂ ಯಾಕೆ ಎಂಬುದು ತನಿಖೆಯಿಂದಷ್ಟೆ ತಿಳಿಯಬೇಕಿದೆ. ಸದ್ಯ ಮಗುವಿನ ಅಜ್ಜಿ ರತ್ನಮ್ಮ, ತಾಯಿ ಹರ್ಷಿತಾ, ತಂದೆ ರಘುಪತಿಯನ್ನ ಕೋಲಾರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.