ಕೋಲಾರ: ನಿರ್ಮಾಣ ಹಂತದ ಕಲ್ಯಾಣ ಮಂಟಪ ಕಟ್ಟಡದ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಕೋಲಾರ ತಾಲೂಕಿನ ಚಲುವನಹಳ್ಳಿ ಗೇಟ್ ಬಳಿ ನಡೆದಿದೆ.
ಬಿಹಾರ ಮೂಲದ ಪ್ರಮೋದ್ (25), ಮಾಮು (45) ಹಾಗೂ ಧರ್ಮೇಂದ್ರ್ (27) ಮೃತ ದುರ್ದೈವಿಗಳು. ಕೋಲಾರ ತಾಲೂಕಿನ ಚಲುವನಹಳ್ಳಿ ಗೇಟ್ ಬಳಿಯ ಬಾಲಾಜಿ ಕಲ್ಯಾಣ ಮಂಟಪದ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಬ್ದುಲ್ ಹಾಗೂ ರಾಕೇಶ್ ಗಾಯಗೊಂಡಿದ್ದು ಅವರನ್ನು ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಕಟ್ಟಡ ಕೆಲಸ ಮಾಡಲು ಬಿಹಾರದಿಂದ ಬಂದಿದ್ದ 5 ಜನ ಕಾರ್ಮಿಕರು ಶನಿವಾರ ಕಟ್ಟಡ ಕಾಮಗಾರಿಯ ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಮೇಲ್ಛಾವಣಿ ಕುಸಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಉಳಿದ ಮೂವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಧರ್ಮೇಂದ್ರ್ ಸಾವನ್ನಪ್ಪಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.