– ಆತಂಕದಲ್ಲಿ ಶಾಲಾ ಆಡಳಿತ ಮಂಡಳಿ, ಪೋಷಕರು
ಕೋಲಾರ: ವಿದ್ಯಾರ್ಥಿಗಳಿಬ್ಬರು ಶಾಲೆಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರ ತಾಲೂಕಿನ ಭಟ್ರಹಳ್ಳಿಯ ಶಾಲೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಗಳು ಭಟ್ರಹಳ್ಳಿ ಸಮೀಪದ ಗ್ರಾಮದ 15 ಹಾಗೂ 16 ಬಾಲಕರು. ಈ ಇಬ್ಬರು ವಿದ್ಯಾರ್ಥಿಗಳು ಭಟ್ರಹಳ್ಳಿ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಎಂದಿನಂತೆ ಸೋಮವಾರ ಶಾಲೆಗೆ ಬಂದು ಪರೀಕ್ಷೆ ಬರೆದಿದ್ದಾರೆ. ಆದರೆ ಮಧ್ಯಾಹ್ನ ಊಟಕ್ಕೆ ಶಾಲೆಯಿಂದ ಹೊರಗೆ ಬಂದಿದ್ದ ಅವರು ತಂಪುಪಾನಿಯದಲ್ಲಿ ವಿಷ ಬೆರೆಸಿ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Advertisement
Advertisement
ವಿಷ ಕುಡಿದು ಬಿದ್ದು ಒದ್ದಾಡುತ್ತಿದ್ದ ವಿದ್ಯಾರ್ಥಿಗಳನ್ನು ನೋಡಿದ ಕೆಲ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕ ಮಂಜುನಾಥ್ ಅವರಿಗೆ ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಮಂಜುನಾಥ್ ಅವರು ಕೆಲ ವಿದ್ಯಾರ್ಥಿಗಳ ಸಹಾಯದಿಂದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ವಿದ್ಯಾರ್ಥಿಗಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಪೋಷಕರು ಹಾಗೂ ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಆದರೆ ಆತ್ಮಹತ್ಯೆಗೆ ಯಾಕೆ ಯತ್ನಿಸಿದ್ದಾರೆ ಎನ್ನುವ ಬಗ್ಗೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ.
Advertisement
ವಿದ್ಯಾರ್ಥಿಗಳು ಈ ಹಿಂದೆಯೇ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಕೈಯನ್ನು ಸ್ವೆಟರ್ ನಿಂದ ಮುಚ್ಚಿಕೊಂಡಿದ್ದರು ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರೊಬ್ಬರು ತಿಳಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಪ್ರೀತಿಯ ವಿಚಾರದಲ್ಲಿ ಮನನೊಂದು ಹೀಗೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
Advertisement
ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಅದರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.