ಕೋಲಾರ: ಸಂಕ್ರಾಂತಿ ವರ್ಷದ ಮೊದಲ ಹಬ್ಬವಾದ ಕಾರಣ ನಾಡಿನ ಎಲ್ಲೆಡೆ ರೈತರು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಆದರೆ ಕೋಲಾರ ಅರಾಭಿಕೊತ್ತನೂರು ಗ್ರಾಮಸ್ಥರಲ್ಲಿ ಸಂಕ್ರಾಂತಿ ಎಂದರೇ ಭಯ, ಆತಂಕ ಎದುರಾಗುತ್ತದೆ. ಸಂಕ್ರಾಂತಿ ಹಬ್ಬ ಮಾಡಿದರೆ ಗ್ರಾಮಕ್ಕೆ ಕೇಡಾಗುತ್ತದೆ, ದನ-ಕರುಗಳು ಒಂದೊಂದಾಗಿ ಸಾಯುತ್ತವೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮೂಡಿದೆ.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಇತ್ತೀಚೆಗಂತೂ ಗ್ರಾಮದ ಹಲವರು ಉತ್ತಮ ಶಿಕ್ಷಣ ಪಡೆದು ಉದ್ಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಸಂಕ್ರಾಂತಿ ಹಬ್ಬವನ್ನು ಮಾಡಿದ್ರೆ ಊರಿಗೆ ಕೆಟ್ಟದಾಗುತ್ತದೆ ಎಂಬ ಹಿರಿಯ ನಂಬಿಕೆಯಂತೆ ಇಂದಿಗೂ ಈ ಗ್ರಾಮದಲ್ಲಿ ಹಬ್ಬ ಆಚರಣೆ ಮಾಡುವುದಿಲ್ಲ.
Advertisement
Advertisement
ಪಕ್ಕದ ಗ್ರಾಮಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರೂ ಅರಾಭಿಕೊತ್ತನೂರಲ್ಲಿ ಮಾತ್ರ ಅಂದು ಯಾವುದೇ ವಿಶೇಷ ಆಚರಣೆ ಮಾಡುವುದಿಲ್ಲ. ಕಳೆದ 300 ವರ್ಷಗಳ ಹಿಂದೆ ಅರಾಭಿಕೊತ್ತನೂರು ಗ್ರಾಮದಲ್ಲಿ ಕಾಯಿಲೆಯೊಂದು ಕಾಣಿಸಿಕೊಂಡು ಊರಲ್ಲಿದ್ದ ದನ-ಕರುಗಳು ಇದ್ದಕ್ಕಿಂದ್ದಂತೆ ಸಾವನ್ನಪ್ಪುತ್ತಿದ್ದವು. ಈ ವೇಳೆ ದಿಕ್ಕು ತೋಚದಂತಾದ ಊರಿನ ಹಿರಿಯರು ಅನಾಹುತವನ್ನು ತಪ್ಪಿಸುವಂತೆ ಊರಿನ ಬಸವಣ್ಣನಲ್ಲಿ ಮನವಿ ಮಾಡಿದ್ದರು. ಕಾಯಿಲೆ ನಿಯಂತ್ರಣಕ್ಕೆ ಬಂದು ಜಾನುವಾರುಗಳ ಸಾವು ನಿಂತರೆ ಸಂಕ್ರಾಂತಿ ಹಬ್ಬದಂದು ದನ-ಕರುಗಳಿಗೆ ಮಾಡುವ ಪೂಜೆಯನ್ನು ನಿಲ್ಲಿಸಿ ಬೇರೊಂದು ದಿನ ಬಸವಣ್ಣನಿಗೆ ಪೂಜೆ ಮಾಡುವುದಾಗಿ ಪ್ರಾರ್ಥನೆ ಮಾಡಿಕೊಂಡಿದ್ದರಂತೆ.
Advertisement
ಹಿರಿಯರ ಪ್ರಾರ್ಥನೆ ಬಳಿಕ ರಾಸುಗಳ ಸಾವು ನಿಯಂತ್ರಣಕ್ಕೆ ಬಂದಿತ್ತು. ಅಂದಿನಿಂದಲೂ ಈ ಗ್ರಾಮದಲ್ಲಿ ಸಂಕ್ರಾಂತಿಯಂದು ಜಾನುವಾರುಗಳಿಗೆ ಯಾವುದೇ ಪೂಜೆ ಮಾಡದೆ, ಸಂಕ್ರಾಂತಿ ಬಳಿಕ ಗ್ರಾಮದಲ್ಲಿರುವ ಬಸವಣ್ಣನ ದೇವಸ್ಥಾನಕ್ಕೆ ರಾಸುಗಳನ್ನು ಅಲಂಕಾರ ಮಾಡಿಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಾರೆ. ಇಂದಿಗೂ ಇದೇ ಪದ್ದತಿಯನ್ನು ಗ್ರಾಮಸ್ಥರು ಪಾಲಿಸಿಕೊಂಡು ಬರುತ್ತಿದ್ದಾರೆ.