ಲಂಡನ್: ಸಭ್ಯರ ಆಟ ಎಂದು ಹೆಸರು ಪಡೆದಿರುವ ಕ್ರಿಕೆಟ್ ಅಧುನಿಕತೆ ಪಡೆದಂತೆ ಬದಲಾವಣೆ ಹೊಂದುತ್ತಿದ್ದು, ಈಗಾಗಲೇ ಸಾಂಪ್ರದಾಯಿಕ ಕ್ರಿಕೆಟ್‍ನೊಂದಿಗೆ ಟಿ20 ಮಾದರಿಯನ್ನು ಸ್ವೀಕರಿಸಿದೆ. ಆದರೆ ಸದ್ಯ ಕ್ರಿಕೆಟ್‍ನಲ್ಲಿ 100 ಬಾಲ್ ಮಾದರಿಯ ಪಂದ್ಯಗಳನ್ನು ತರಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸಿದ್ಧತೆ ನಡೆಸಿದ್ದು, ಈ ಕುರಿತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಹೊಸ ಕ್ರಿಕೆಟ್ ಮಾದರಿಯ ಕುರಿತು ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದು, ಕೇವಲ ವಾಣಿಜ್ಯದ ದೃಷ್ಟಿಯಿಂದ ಈ ರೀತಿಯ ಮಾದರಿಯನ್ನು ಪರಿಚಯಿಸುವುದು ಸರಿಯಲ್ಲ. ತಾನು ಈ ಮಾದರಿಯ ಕ್ರಿಕೆಟ್‍ನಲ್ಲಿ ಭಾಗವಹಿಸುವುದಿಲ್ಲ. ಈ ಕುರಿತು ಯೋಚನೆಯನ್ನು ಮಾಡಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಟಿ20 ಮಾದರಿಯಲ್ಲಿ ನಡೆಯುವ ಟೂರ್ನಿಯ ಕುರಿತು ಸ್ಪಷ್ಟನೆ ನೀಡಿರುವ ಕೊಹ್ಲಿ, ತಾನು ಐಪಿಎಲ್ ನಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ. ಅಲ್ಲದೇ ಬ್ರಿಟಿಷ್ ಬಿಗ್ ಬ್ಯಾಷ್ ಲೀಗ್ (ಬಿಬಿಸಿ) ನೋಡುತ್ತೆನೆ. ಏಕೆಂದರೆ ಈ ಮಾದರಿಯಲ್ಲಿ ನಾವು ಸ್ಪರ್ಧಾತ್ಮಕ ಆಟವನ್ನು ಕಾಣಲು ಸಾಧ್ಯವಿದೆ. ಒಬ್ಬ ಕ್ರಿಕೆಟಿಗನಾಗಿ ಇದನ್ನು ನೋಡಲು ಸಂತಸವಾಗುತ್ತದೆ. ಆದರೆ ಕ್ರಿಕೆಟ್ ನಲ್ಲಿ ಮತ್ತಷ್ಟು ಪ್ರಯೋಗಗಳನ್ನು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾರೆ.
ಹಲವು ಹಿರಿಯ ಆಟಗಾರರು ಕ್ರಿಕೆಟ್ ಆಟವನ್ನು ಉತ್ತಮ ಪಡಿಸಲು ಸಾಕಷ್ಟು ಶ್ರಮವಹಿಸಿದ್ದಾರೆ. ಇದು ಆಟವನ್ನು ಮತ್ತಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಅದ್ದರಿಂದ ಸಾಂಪ್ರದಾಯಿಕ ಕ್ರಿಕೆಟ್‍ಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳು ಹೆಚ್ಚು ನಡೆಯಬೇಕಿದೆ ಎಂದು ತಿಳಿಸಿದ್ದಾರೆ.
ಅಂದಹಾಗೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 100 ಎಸೆತ ಕ್ರಿಕೆಟ್ ಮಾದರಿ ನಡೆಸಲು ಸಿದ್ಧತೆ ನಡೆಸಿದ್ದು, 2020ರ ವೇಳೆಗೆ ಇಂತಹ ಟೂರ್ನಿಯಗಳನ್ನು ನಡೆಸುವ ಚಿಂತನೆ ನಡೆಸಿದೆ. ಕೊಹ್ಲಿ ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಅದರಿಂದ ಇಂಗ್ಲೆಂಡ್ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಟೂರ್ನಿಯ ಸರಣಿ ಕೈವಶ ಮಾಡಿಕೊಳ್ಳಲು ಟೀಂ ಇಂಡಿಯಾ ಆಟಗಾರರು ಶ್ರಮವಹಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv