ಐಸಿಸಿ ಪ್ರಶಸ್ತಿ ಪಡೆದು ವಿಶ್ವದಾಖಲೆ ನಿರ್ಮಿಸಿದ ಕೊಹ್ಲಿ

Public TV
2 Min Read
kohli

ದುಬೈ: ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಐಸಿಸಿ ನೀಡುವ ಪ್ರಶಸ್ತಿಯಲ್ಲೂ ವಿಶ್ವದಾಖಲೆ ಬರೆದಿದ್ದಾರೆ.

ಐಸಿಸಿ ವರ್ಷದ ಪುರುಷ ಆಟಗಾರ, ವರ್ಷದ ಟೆಸ್ಟ್, ಏಕದಿನ ಆಟಗಾರ, ವರ್ಷದ ಟೆಸ್ಟ್ ಮತ್ತು ಏಕದಿನ ನಾಯಕ ಪ್ರಶಸ್ತಿಯನ್ನು ಕೊಹ್ಲಿ ಪಡೆದಿದ್ದಾರೆ. ಈ ಮೂಲಕ ಒಂದೇ ವರ್ಷ 5 ಪ್ರಶಸ್ತಿಗಳನ್ನು ಪಡೆದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಯನ್ನು ಕೊಹ್ಲಿ ಪಡೆದುಕೊಂಡಿದ್ದಾರೆ.

ಕೊಹ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ 13 ಟೆಸ್ಟ್ ಪಂದ್ಯಗಳಿಂದ 55.08 ಸರಾಸರಿಯಲ್ಲಿ 1,322 ರನ್ ಗಳಿಸಿದ್ದು, ಇದರಲ್ಲಿ ಐದು ಶತಕಗಳು ಸೇರಿದೆ. 14 ಏಕದಿನ ಪಂದ್ಯಗಳಿಂದ 6 ಶತಕಗಳೊಂದಿಗೆ 133.55 ಸರಾಸರಿಯಲ್ಲಿ 1,202 ರನ್ ಸಿಡಿಸಿದ್ದಾರೆ. ಉಳಿದಂತೆ 10 ಟಿ20 ಪಂದ್ಯಗಳಲ್ಲಿ 211 ರನ್ ಗಳಿಸಿದ್ದಾರೆ.

30 ವರ್ಷದ ನಾಯಕ ವಿರಾಟ್ ಕೊಹ್ಲಿ 2008ರಲ್ಲಿ ನಡೆದ ಐಸಿಸಿ ಅಂಡರ್ 19 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾಗೆ ಆಯ್ಕೆ ಆಗಿದ್ದರು. ಸದ್ಯ ಟೆಸ್ಟ್ ಹಾಗೂ ಏಕದಿನ ಮಾದರಿ ಕ್ರಿಕೆಟಿನಲ್ಲಿ ನಂ.1 ಶ್ರೇಯಾಂಕ ಪಡೆದಿರುವ ಕೊಹ್ಲಿ, ಈ ಎರಡು ಮಾದರಿಗಳಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

kohli

ಕೊಹ್ಲಿ ಕಳೆದ ಬಾರಿ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ ಹಾಗೂ ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೇ 2012 ರಲ್ಲಿ ಐಸಿಸಿ ಏಕದಿನ ಪ್ರಶಸ್ತಿಯನ್ನು ಕೂಡ ಪಡೆದಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ಐಸಿಸಿ ಪ್ರಶಸ್ತಿಯ ಗೌರವ ಲಭಿಸಿರುವುದು ಸಂತಸ ತಂದಿದ್ದು, ವರ್ಷದುದ್ದಕ್ಕೂ ಆಟಗಾರ ಪಟ್ಟ ಶ್ರಮಕ್ಕೆ ಸಿಗುವ ಬಹುಮಾನವಾಗಿದೆ. ಇದರೊಂದಿಗೆ ತಂಡ ಕೂಡ ಉತ್ತಮ ಪ್ರದರ್ಶನ ನೀಡುತ್ತಿರುವುದು ಮತ್ತಷ್ಟು ಸಂತಸಕ್ಕೆ ಕಾರಣವಾಗಿದ್ದು, ವಿಶ್ವ ಮಟ್ಟದಲ್ಲಿ ಗೌರವ ಸಿಗುವುದು ಯಾವುದೇ ಆಟಗಾರನಿಗೆ ಹೆಮ್ಮೆ ಅನಿಸುತ್ತದೆ ಎಂದಿದ್ದಾರೆ.

ಇಂತಹ ಪ್ರಶಸ್ತಿಗಳು ನಿಮ್ಮನ್ನು ಮತ್ತಷ್ಟು ಉತ್ತಮ ಪ್ರದರ್ಶನ ಹಾಗೂ ಸಾಧನೆ ಮಾಡುವುಕ್ಕೆ ಪ್ರೇರಣೆ ಆಗಿದೆ. ಕ್ರಿಕೆಟ್ ಆಟದಲ್ಲಿ ಸ್ಥಿತ ಪ್ರದರ್ಶನ ನೀಡುವುದು ಬಹಳ ಮುಖ್ಯವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *