ಕುಶಾಲನಗರದ ಹೃದಯ ಭಾಗದ ವೃತ್ತದಲ್ಲಿ ಅಡ್ಡಾದಿಡ್ಡಿ ವಾಹನಗಳ ಓಡಾಟ- ನಿತ್ಯವೂ ಟ್ರಾಫಿಕ್ ಕಿರಿಕಿರಿ

Public TV
2 Min Read
MDK Kushalnagar Traffic A

ಮಡಿಕೇರಿ: ನೂತನ ಕೇಂದ್ರವಾಗಿ ಸರ್ಕಾರ ಘೋಷಣೆ ಮಾಡಿರುವ ಕುಶಾಲನಗರದಲ್ಲಿ ಕಾನೂನು ಸುವ್ಯವಸ್ಥೆ ಸೇರಿದಂತೆ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಹೆಚ್ಚುವರಿಯಾಗಿ ಗ್ರಾಮಾಂತರ ಹಾಗೂ ಸಂಚಾರ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಕಂಡುಬಂದಿಲ್ಲ.

ಕುಶಾಲನಗರವು ಕೊಡಗು ಜಿಲ್ಲೆಯ ಪ್ರಮುಖ ವಾಣಿಜ್ಯ ನಗರವಾಗಿದ್ದು, ಇಲ್ಲಿನ ಹೃದಯಭಾಗದಲ್ಲಿ ಮೈಸೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮತ್ತು ಹಾಸನ, ಕೇರಳ ಕಣ್ಣೂರು ರಾಜ್ಯ ಹೆದ್ದಾರಿ ಹಾದು ಹೋಗಿವೆ. ಇದರೊಂದಿಗೆ ನಗರದ ನಾಲ್ಕು ದಿಕ್ಕುಗಳಿಂದ ಕುಶಾಲನಗರಕ್ಕೆ ಬಂದು ಸೇರುವ ರಸ್ತೆಗಳಲ್ಲಿ ನಿತ್ಯವೂ ಹೆಚ್ಚು ಹೆಚ್ಚು ವಾಹನಗಳ ಸಂಚರಿಸುತ್ತಿರುತ್ತವೆ. ಇದರೊಂದಿಗೆ ಕುಶಾಲನಗರದ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳಾದ ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ದುಬಾರೆ ಆನೆ ಕ್ಯಾಂಪ್, ಕಾವೇರಿ ರಿವರ್ ರ‍್ಯಾಫ್ಟಿಂಗ್, ಬೈಲುಕುಪ್ಪೆ ಗೋಲ್ಡನ್ ಟೆಂಪಲ್‍ಗಳಿಗೆ ಪ್ರವಾಸಿಗರು ಆಗಮಿಸುತ್ತಾರೆ.

MDK Kushalnagar Traffic problem

ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನ ಅಪಘಾತಗಳು ಸಂಭವಿಸಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು, ಹಿರಿಯ ನಾಗರಿಕರು, ಪಾದಚಾರಿಗಳಿಗೆ ಪ್ರಾಣಹಾನಿ ಹಾಗೂ ಗಾಯ, ನೋವು ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಅನೇಕ ಮಾರ್ಪಾಡು ಮಾಡಿದೆ.

ಪಟ್ಟಣದಲ್ಲಿ ನಿತ್ಯವೂ ವಾಹನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆಯೊಂದಿಗೆ ಸಂಚಾರ ನಿಯಮಗಳನ್ನು ಪಾಲಿಸಲು ಅನುಕೂಲವಾಗುವಂತೆ ಕಳೆದ ಎರಡು ವರ್ಷಗಳ ಹಿಂದೆ ಕೂಡ್ಲೂರು ಕೈಗಾರಿಕಾ ಬಡಾವಣೆ ಬಳಿ ಪ್ರತ್ಯೇಕವಾಗಿ ಸಂಚಾರಿ ಪೊಲೀಸ್ ಠಾಣೆ ತೆರೆಯಲಾಗಿದೆ. ಅದೇ ರೀತಿ ಪಟ್ಟಣದ ಕಾರ್ಯಪ್ಪ ವೃತ್ತದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಟ್ರಾಫಿಕ್ ಸಿಗ್ನಲ್‍ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಪಟ್ಟಣದ ರಥಬೀದಿ, ಕಿತ್ತೂರು ರಾಣಿ ಚೆನ್ನಮ್ಮ (ಕನ್ನಿಕಾ) ರಸ್ತೆಯಲ್ಲಿ ಬೆಳಗ್ಗೆ 8ರಿಂದ ರಾತ್ರಿ 9 ಗಂಟೆಯವರೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೂ ದಿನನಿತ್ಯ ವಾಹನ ದಟ್ಟಣೆಯಿಂದ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

MDK Kushalnagar Traffic D

ಕುಶಾಲನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹಾಗೂ ವಾಹನ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದ್ದು, ಪಟ್ಟಣದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಆಟೋರಿಕ್ಷಾಗಳಿವೆ. ನಿಗದಿತ ಆಟೋ ಸ್ಟ್ಯಾಂಡ್‍ಗಳ ಕೊರತೆ ಕೂಡ ಇದೆ. ಎಲ್ಲೆಂದರಲ್ಲಿ ಆಟೋರಿಕ್ಷಾ ನಿಲ್ಲಿಸಲಾಗುತ್ತಿದೆ. ಇದರಿಂದ ಕೂಡ ಸುಗಮ ಸಂಚಾರ ವ್ಯವಸ್ಥೆಗೆ ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *