ಹಾಸನ: ಶುಕ್ರವಾರ ಸಂಭವಿಸಲಿರುವ ಚಂದ್ರ ಗ್ರಹಣದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗಲಿದ್ದು, ಎಚ್.ಡಿ.ರೇವಣ್ಣನವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಅರ್ಥವಿರುವ ಭವಿಷ್ಯವನ್ನು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದಾರೆ.
ತಾಳೆಗರಿ ನೋಡಿ ಭವಿಷ್ಯ ಹೇಳುವ ಶ್ರೀಗಳು `ಅರಸನ ಆಯಸ್ಸು ಉಸಿರಲ್ಲಿ ನಿಂತೀತು, ಪರಸಕ್ಕೆ ಭಂಗ ಪ್ರಸಂಗಕ್ಕೆ ಹಾನಿ, ಭಾತೃ ಬೆಂಕಿ ಹಿಡಿದಾನು’ ಎಂದು ಒಗಟಾಗಿ ತಿಳಿಸಿದ್ದಾರೆ. ಅಂದರೆ `ಸಹೋದರ ಬೆಂಕಿ ಹಿಡಿದಾನು ಎಂದರೆ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಸಹೋದರ ಎಚ್.ಡಿ.ರೇವಣ್ಣ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಈ ಭವಿಷ್ಯ ಅರ್ಥ ಮೂಡಿಸುತ್ತದೆ.
ಪ್ರಾಕೃತಿಕ ಸಂಪನ್ಮೂಲಗಳು ನಾಶವಾಗಲಿದ್ದು, ಮುಂದಿನ ದಿನಗಳಲ್ಲಿ ಭೂಕಂಪನವಾಗಲಿದೆ. ಇನ್ನೂ ಹೆಚ್ಚು ಮಳೆಯಾಗಲಿದ್ದು, ಬರುವ ವಿಶೇಷ ದಿನಗಳು ಕಷ್ಟಕರವಾಗಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದ್ದಾರೆ.
ವಿಧಾನಸಭಾ ಚುನಾವಣೆಗೂ ಮುನ್ನ “ಬಿತ್ತಿದ ಬೆಳಸು ಪೈರು ಕುಯ್ದಾರು, ಬಿತ್ತಿದ ಬೀಜ ಒಂದು ಬೆಳೆದ ಪೈರೋಂದು” ಎಂದು ಭವಿಷ್ಯ ನುಡಿದಿದ್ದರು. ಅಂದರೆ ಮುಂದಿನ ಚುನಾವಣೆ ಫಲಿತಾಂಶದಲ್ಲಿ ಅನಿರೀಕ್ಷಿತ ಬದಲಾವಣೆಗಳಾಗುವ ಸಾಧ್ಯತೆ ಇದೆ. ಯಾರೋ ಹಾಕಿದ ಶ್ರಮದ ಫಲವನ್ನ ಇನ್ನೊಬರು ಅನುಭವಿಸಲಿದ್ದಾರೆ. ಹಾಗೇ ಅನಿರೀಕ್ಷಿತ ಅಧಿಕಾರ ಚುಕ್ಕಾಣಿ ಹಿಡಿಯುವ ಸನ್ನಿವೇಶಗಳಿವೆ ಅನ್ನೊದನ್ನ ಹೇಳಿದ್ದಾರೆ.