ಧಾರವಾಡ: ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿನ ರೀತಿಯಲ್ಲಿಯೇ, ಈ ದೇಶದಲ್ಲಿ ಮತ್ತೊಬ್ಬ ಮಹಾನ್ ನಾಯಕನ ಅವನತಿಯಾಗುತ್ತದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ದಸರಾ ಜಂಬೂ ಸವಾರಿ ಉತ್ಸವಕ್ಕೆ ಆಗಮಿಸಿದ್ದ ಶ್ರೀಗಳು, ರಾಷ್ಟ್ರ ರಾಜಕಾರಣದ ಬಗ್ಗೆ ಈಗಲೇ ಮಾತನಾಡಲ್ಲ ಆದರೆ ಹಿಂದೆ, ಚೋಟು ಗೇಣಿನ ವೀರ. ಭಾರತದ ಕುವರ ತಕ್ಕಡಿಯ ಊರಿನಲ್ಲಿ ವಿಷಪಾನ ಮಾಡುತ್ತಾನೆ’ ಎಂದು ಹೇಳಿದ್ದೆ. ಈ ಹೇಳಿಕೆಯ ಬಳಿಕ ಆಗ ತಾಷ್ಕೆಂಟ್ ನಲ್ಲಿ ಲಾಲಬಹದ್ದೂರ್ ಶಾಸ್ತ್ರಿ ಅವರ ಸಾವು ಸಂಭವಿಸಿತ್ತು. ಈಗ ಅಂಥದ್ದೇ ಘಟನೆ ಈ ದೇಶದಲ್ಲಿ ಮರುಕಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಿದರು.
Advertisement
ರಾಜ್ಯ ಸರ್ಕಾರ ಮೌಢ್ಯ ನಿಷೇಧ ಪ್ರತಿಬಂಧಕ ಕಾಯ್ದೆ ತರುತ್ತಿರುವದು ಸ್ವಾಗತಾರ್ಹ. ಜನರು ಮೊದಲಿನಿಂದಲೂ ಸತ್ಯಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕೆಲವರು ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಜನರ ಸುಲಿಗೆ ಮಾಡುತ್ತಿದ್ದಾರೆ. ಹಾಗಾಗಿ ಮೌಢ್ಯ ನಿಷೇಧ ಕಾಯ್ದೆ ಜಾರಿ ಮಾಡುತ್ತಿರುವುದು ಒಳ್ಳೆಯ ಕಾರ್ಯ ಎಂದರು. ಈ ಕಾಯ್ದೆ ಬಂದರೆ ಸತ್ಯ ಉಳಿಯುತ್ತದೆ. ಇನ್ನೂ ಜನವರಿವರೆಗೆ ಇದೇ ರೀತಿ ಅಕಾಲಿಕ ಮಳೆಯಾಗಲಿದೆ ಎಂದು ಹೇಳಿದರು.
Advertisement
ಶಾಸ್ತ್ರಿ ಮೃತಪಟ್ಟಿದ್ದು ಹೇಗೆ?
ಪಾಕಿಸ್ತಾನ ವಿರುದ್ಧದ ಎರಡನೇ ಯುದ್ಧದಲ್ಲಿ ಭಾರತ ಜಯಗಳಿಸಿತ್ತು. ಈ ವೇಳೆ ಎರಡು ದೇಶಗಳ ಮಧ್ಯೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ 1966 ಜನವರಿ 10 ರಂದು ರಷ್ಯಾದ ತಾಷ್ಕೆಂಟ್‍ನಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಪಾಕಿಸ್ತಾನದ ಅಂದಿನ ಅಧ್ಯಕ್ಷರಾದ ಆಯೂಬ್ ಖಾನ್ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಈ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು. ಉಭಯ ದೇಶಗಳ ನಾಯಕರು ರಷ್ಯಾದ ಮಧ್ಯಸ್ಥಿಕೆಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರು.
Advertisement
ಶಾಸ್ತ್ರಿ ಅವರು ಸಹಿ ಹಾಕಿದ ಗಂಟೆಯಲ್ಲೇ ಹೃದಯಾಘಾತದಿಂದ ಸಾವನ್ನಪಿದ್ದರು. ರಷ್ಯಾ ವೈದ್ಯರು ಕೂಡ ಶಾಸ್ತ್ರಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಿದ್ದರು. ಆದರೆ ಶಾಸ್ತ್ರಿಯವರ ಕುಟುಂಬದ ನಿಕಟವರ್ತಿಯಾಗಿದ್ದ ಪತ್ರಕರ್ತ ಕುಲದೀಪ್ ನಯ್ಯರ್ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರನ್ನು ವಿಷಪ್ರಾಶನ ಮಾಡಿ ಹತ್ಯೆ ಮಾಡಲಾಗಿದೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು. ಶಾಸ್ತ್ರಿ ಕುಟುಂಬದ ಸದಸ್ಯರು ರಷ್ಯಾದಲ್ಲಿ ಮರಣೋತ್ತರ ಪರೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿದ್ದರು. ಒಟ್ಟಿನಲ್ಲಿ ಇಲ್ಲಿಯವರೆಗೂ ಶಾಸ್ತ್ರಿ ಮೃತಪಟ್ಟ ವಿಚಾರ ಚಿದಂಬರ ರಹಸ್ಯವಾಗಿಯೇ ಉಳಿದಿದೆ.