ರಾಂಚಿ: ಶಿಕ್ಷಕನೋರ್ವ ಶಾಲೆಯ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಾರ್ಖಂಡ್ ರಾಜ್ಯದ ಕೊಡ್ರಮಾ ಜಿಲ್ಲೆಯ ಜಿ.ಎಸ್.ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದಿದೆ.
ವಿಶಾಲ್ ಶರ್ಮಾ ಆತ್ಮಹತ್ಯೆಗೆ ಶರಣಾದ ಶಿಕ್ಷಕ. ವಿಶಾಲ್ ಶರ್ಮಾ ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಮಂಗಳವಾರ ಎಂದಿನಂತೆ ಬೆಳಗ್ಗೆ ಪ್ರಾರ್ಥನೆಗೆ ಶಿಕ್ಷಕ ವಿಶಾಲ್ ಗೈರಾಗಿದ್ದರು. ಮಕ್ಕಳು ಶಿಕ್ಷಕರನ್ನು ಕರೆ ತರುವುದಾಗಿ ಅವರ ಕೋಣೆಯತ್ತ ತೆರಳಿದ್ದರು. ಬಾಗಿಲು ಹಾಕಿದ್ದರಿಂದ ಮಕ್ಕಳು ಕಿಟಕಿಯಲ್ಲಿ ನೋಡಿದಾಗ ವಿಶಾಲ್ ಶವ ನೇತಾಡುವ ಸ್ಥಿತಿಯಲ್ಲಿತ್ತು. ಇದನ್ನ ಕಂಡ ಮಕ್ಕಳು ಜೋರಾಗಿ ಕಿರುಚುತ್ತಾ ಮೈದಾನದತ್ತ ಓಡಿ ಬಂದರು ಎಂದು ಶಾಲೆಯ ನಿರ್ದೇಶಕ ನಿತೇಶ್ ಕುಮಾರ್ ತಿಳಿಸಿದ್ದಾರೆ.
ಸದ್ಯ ಶಾಲೆಗೆ ರಜೆ ನೀಡಲಾಗಿದ್ದು, ಪೊಲೀಸರು ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ವಿಶಾಲ್ ಮೂಲತಃ ಗಿರಿಡಿಹ ಜಿಲ್ಲೆಯ ಲೆದಾ ಬರ್ಕಟ್ಟಾ ನಿವಾಸಿಯಾಗಿದ್ದು, ಆತನ ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ. ಸೋಮವಾರ ರಾತ್ರಿ 9 ಗಂಟೆಯವರೆಗೂ ವಿಶಾಲ್ ನಮ್ಮೊಂದಿಗೆ ಕೆಲಸ ಮಾಡಿದ್ದಾರೆ. ಶಾಲೆಯಲ್ಲಿ ಆಯೋಜಿಸಿರುವ ಸರಸ್ವತಿ ಪೂಜೆಗೆ ಯಾರನ್ನು ಆಹ್ವಾನಿಸಬೇಕು ಎಂಬುದರ ಕುರಿತಾಗಿ ನಮ್ಮ ಜೊತೆ ಚರ್ಚೆ ನಡೆಸಿದ್ದರು. ತಾವೇ ಎಲ್ಲ ಆಹ್ವಾನ ಪತ್ರಿಕೆಗಳ ಮೇಲೆ ಅತಿಥಿಗಳ ಹೆಸರು ಬರೆದು ತಮ್ಮ ಕೋಣೆಯತ್ತ ಹೋಗಿದ್ದರು. ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ವಿಶಾಲ್ ಶವ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ನಿತೇಶ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv