ಮಡಿಕೇರಿ: ಕೊಡಗಿನ ಉಮ್ಮತ್ತಾಟ್, ಬೊಳಕ್ಕಾಟ್, ಕತ್ತಿಯಾಟ್ ಸೇರಿದಂತೆ ವಿವಿಧ ವಿಶಿಷ್ಟ ಜಾನಪದ ಕಲೆಗಳನ್ನು ಪ್ರದರ್ಶಿಸುವ ಮೂಲಕ ಚಿಣ್ಣರರು ಕಣ್ಣಿಗೆ ಹಬ್ಬವನ್ನುಂಟು ಮಾಡಿದರು.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿಯ ರೂಟ್ಸ್ ಎಜುಕೇಷನ್ ಟ್ರಸ್ಟ್ (ರಿ)ನಲ್ಲಿ 5ನೇ ವರ್ಷದ ಮಕ್ಕಳ ಕೊಡವ ಜನಪದ ಸಾಂಸ್ಕೃತಿಕ ನಮ್ಮೆ ಸಂಭ್ರಮದಲ್ಲಿ ಮಕ್ಕಳು ನೃತ್ಯಗಳನ್ನು ಮಾಡಿದರು. ಕೊಡವ ಸಂಸ್ಕೃತಿಯ ಭವಿಷ್ಯದ ವಾರಸುದಾರರಾದ ಚಿಣ್ಣರರು ಸುಮಧುರ ಸಂಗೀತಕ್ಕೆ ಹಾಡಿನಲಿಯೋ ಕಲೆಯನ್ನು ಪ್ರದರ್ಶಿಸಿದರು.
ನಶಿಸುತ್ತಿರುವ ಕೊಡಗಿನ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಾಲಕಿಯರು ಉಮ್ಮತ್ತಾಟ್, ಬಾಲಕರು ಕೋಲಾಟ್, ಕತ್ತಿಯಾಟ್, ಬೊಳಕಾಟ್, ಪರೆಕಳಿ, ಸೇರಿದಂತೆ ಕೊಡಗಿನ ವಿವಿಧ ಜಾನಪದ ಕಲೆಗಳನ್ನು ಪ್ರದರ್ಶಿಸಿದರು. ಕುಣಿದು ನಲಿಯುವ ಮೂಲಕ ಮಕ್ಕಳು ಎಲ್ಲರ ಮೆಚ್ಚುಗೆ ಗಳಿಸಿದರು. ಜಿಲ್ಲೆಯಾದ್ಯಂತ 20ಕ್ಕೂ ಅಧಿಕ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕೊಡವ ಮಕ್ಕಳ ಕೂಟ ಸಾಥ್ ನೀಡಿತು.
ಗ್ರಾಮೀಣ ಜಾನಪದ ಕಲೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ರಾಜ್ಯದ ವಿಶಿಷ್ಟ ಕೊಡವ ಸಂಸ್ಕೃತಿಯನ್ನು ಉಳಿಸಲು ಕೊಡವ ಸಾಹಿತ್ಯ ಅಕಾಡೆಮಿ ಶ್ರಮಿಸುತ್ತಿದ್ದು, ಮಕ್ಕಳಿಗಾಗಿ ವಿಶೇಷ ಸ್ಪರ್ದೆಗಳನ್ನು ಆಯೋಜಿಸಿ ಜಾನಪದ ಕಲೆಗಳ ಬಗ್ಗೆ ಆಸಕ್ತಿ ಮೂಡಿಸುತ್ತಿದೆ. ಕೊಡವರ ಸಾಂಪ್ರದಾಯಿಕ ಉಡುಗೆಯುಟ್ಟು ಕೈಯಲ್ಲಿ ಕೋಲು, ಕತ್ತಿಗಳನ್ನು ಹಿಡಿದು ಮಕ್ಕಳು ಮಾಡುತ್ತಿದ್ದ ನೃತ್ಯಕ್ಕೆ ನೆರೆದಿದ್ದ ಜನ ಚಪ್ಪಾಳೆ ಮೂಲಕ ಮಕ್ಕಳನ್ನು ಹುರಿದುಂಬಿಸುತ್ತಿದ್ದರು.