– ಬಾವಿಯ ನೀರು ಕುಡಿಯುತ್ತಿದ್ದ ಶಾಲಾ ಮಕ್ಕಳು
ಮಡಿಕೇರಿ: ತಾಯಿ ಹಾಗೂ ಮಗಳನ್ನು ಕೊಲೆಗೈದ ಹಂತಕರು ಶಾಲಾ ಮಕ್ಕಳು ಕುಡಿಯುವ ನೀರಿನ ಬಾವಿಯಲ್ಲಿ ಎಸೆದಿರುವ ಅಮಾನವೀಯ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಅಸ್ಸಾಂ ಮೂಲದ ಕಾರ್ಮಿಕ ಆಲಿ ಎಂಬವರ ಪತ್ನಿ ಹಾಗೂ ಪುತ್ರಿ ಕೊಲೆಯಾದ ತಾಯಿ-ಮಗಳು. ವೀರಾಜಪೇಟೆ ಸಮೀಪದ ಕೊಳತ್ತೋಡು ಬೈಗೋಡು ಗ್ರಾಮದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮುಕ್ಕಾಟಿರ ದೇವಯ್ಯ ಎಂಬವರ ತೋಟದಲ್ಲಿ ಆಲಿ ಎರಡು ವಾರಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ. ಆಲಿ ತನ್ನೊಂದಿಗೆ ಇದ್ದ ಮಹಿಳೆಯನ್ನು ಪತ್ನಿ ಹಾಗೂ ಬಾಲಕಿಯನ್ನು ಪುತ್ರಿಯೆಂದು ಪರಿಚಯಿಸಿದ್ದ. ಇದೇ ತಿಂಗಳ 20ರಂದು ಪತ್ನಿ ಹಾಗೂ ಮಗಳು ಸಂತೆಗೆ ಹೋದವರು ಮನೆಗೆ ಹಿಂತಿರುಗಿಲ್ಲ ಎಂದು ಆಲಿ ಹೇಳಿಕೊಂಡಿದ್ದ. ಆದರೆ ಆಲಿ ಪತ್ನಿ ಹಾಗೂ ಪುತ್ರಿ ಮೃತದೇಹಗಳು ಇಂದು ಆತ ವಾಸಿಸುತ್ತಿದ್ದ ಮನೆಯ ಸಮೀಪದಲ್ಲಿದ್ದ ಪತ್ತೆಯಾಗಿವೆ.
ಶಾಲೆಗೆ ನೀರು ಸರಬರಾಜು ಮಾಡುವ ಬಾವಿಯಿಂದ ದುರ್ವಾಸನೆ ಬರುತ್ತಿದೆ ಎಂದು ವಿದ್ಯಾರ್ಥಿಗಳು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಸ್ಥಳೀಯರು ಮತ್ತು ಶಿಕ್ಷಕರು ನೋಡಿದಾಗ ಬಾವಿಯಲ್ಲಿ ಎರಡು ಮೃತದೇಹಗಳು ತೇಲುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹಗಳನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್‍ಪಿ ಜಯಕುಮಾರ್, ವೃತ್ತ ನಿರೀಕ್ಷಕ ಕ್ಯಾತೇಗೌಡ, ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಮರಿಸ್ವಾಮಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.