ಮಡಿಕೇರಿ: ಕೊಡಗು ಜಲಪ್ರಳಯಕ್ಕೆ ತತ್ತರಿಸಿ ಹೋಗಿ ಈಗಾಗಲೇ ಎರಡೂವರೆ ತಿಂಗಳು ಕಳೆದಿದೆ. ದುರಂತದಲ್ಲಿ ಮನೆಯನ್ನು ಕಳೆದುಕೊಂಡವರು ಸಾವಿರಾರು ಮಂದಿ ಇದ್ದಾರೆ. ಇವರಿಗೆಲ್ಲಾ ಆದಷ್ಟು ಶೀಘ್ರವೇ ಮನೆಗಳನ್ನು ಕಟ್ಟಿಕೊಡುವ ಭರವಸೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲರಿಂದಲೂ ಸಿಕ್ಕಿತ್ತು.
ಆಗಿದ್ದು ಆಗಿ ಹೋಯಿತು, ಇನ್ನೇನು ಕೆಲವೇ ತಿಂಗಳಲ್ಲಿ ನಮಗೆಲ್ಲಾ ಸೂರು ಸಿಗುತ್ತೆ ಅಂದು ಕೊಂಡಿದ್ದ ಮಂದಿಗೆ ಇದೀಗ ನಿರಾಸೆ ಆಗುತ್ತಿದೆ. ಯಾಕೆಂದರೆ ಸರ್ಕಾರ ಇನ್ನೂ ಮಾದರಿ ಮನೆಗಳನ್ನು ಫೈನಲ್ ಮಾಡುವ ಕೆಲಸಕ್ಕೆ ಕೈ ಹಾಕಿಲ್ಲ.
Advertisement
Advertisement
ಮನೆ ನಿರ್ಮಾಣಕ್ಕೆ ಪೂರಕವಾಗಿ ಕೆಲಸಗಳು ಕೂಡ ಮೊದ ಮೊದಲು ಭರದಿಂದಲೇ ಸಾಗಿದವು. ಈಗಾಗಲೇ ಮಾದರಿ ಮನೆಗಳ ಕೆಲಸ ಕೂಡ ಪೂರ್ಣಗೊಳ್ಳುವ ಹಂತದಲ್ಲಿದೆ. ಇನ್ನೇನು ಬೇಗನೆ ಮನೆಗಳನ್ನು ಕಟ್ಟುತ್ತಾರೆ ಅಂತಾ ಸಂತ್ರಸ್ತರು ಅಂದುಕೊಂಡಿದ್ದರು. ಆದರೆ ಸದ್ಯದ ಬೆಳವಣಿಗೆಗಳನ್ನು ನೋಡಿದರೆ ರಾಜ್ಯ ರಾಜಕೀಯದಲ್ಲೇ ಹೆಚ್ಚು ತಲೆಕೆಡಿಸಿಕೊಂಡಿರುವ ರಾಜಕೀಯ ನಾಯಕರು ನಮ್ಮ ಕಡೆ ಗಮನ ಹರಿಸಿಲ್ಲ ಅಂತಾ ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಮನೆಗಳನ್ನು ಕಳೆದುಕೊಂಡ ನಿರಾಶ್ರಿತರು ಇನ್ನೂ ಆಶ್ರಯ ಕೇಂದ್ರಗಳಲ್ಲೇ ದಿನಗಳನ್ನು ದೂಡುತ್ತಿದ್ದಾರೆ. ಬಾಡಿಗೆ ಮನೆಗೆ ತೆರಳುವ ಜನರಿಗೆ ಜಿಲ್ಲಾಡಳಿತವೇ ಬಾಡಿಗೆ ಹಣ ಪಾವತಿಸುತ್ತದೆ ಅಂತಾ ಹೇಳಿತ್ತು. ಆದರೂ ಇದು ಕಾರ್ಯರೂಪಕ್ಕೆ ಬಂದಿಲ್ಲ. ಈ ಕುರಿತು ಜಿಲ್ಲಾಡಳಿತವು ಮೌನವಾಗಿ ಉಳಿದಿದೆ. ಇನ್ನೂ ನಾವು ಎಷ್ಟು ದಿವಸ ಇದೇ ರೀತಿಯ ಜೀವನವನ್ನು ನಡೆಸಬೇಕು? ಮೊದಮೊದಲು ತೋರಿದ ಆಸಕ್ತಿ ಈಗ ಯಾಕಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
Advertisement
ಜಿಲ್ಲೆಯ ಜನರು ಜಲಪ್ರಳಯದಲ್ಲಿ ಸಿಕ್ಕಿದ್ದಾಗ ರಾಜ್ಯ ಸರ್ಕಾರ ಸ್ಪಂದಿಸಿದ ರೀತಿ ಎಲ್ಲರಿಗೂ ಖುಷಿ ತಂದಿತ್ತು. ಕೊನೆಪಕ್ಷ ನಮ್ಮ ಕಷ್ಟಕ್ಕೆ ಮಿಡಿಯುವ ಮಂದಿ ಇದ್ದಾರೆ ಎನ್ನುವ ಸಮಾಧಾನ, ಸೂರುಗಳನ್ನು ಕಳೆದುಕೊಂಡ ಜನರಲ್ಲಿತ್ತು. ಆದರೆ ಎರಡೂವರೆ ತಿಂಗಳು ಕಳೆದರೂ ನಮಗೆ ಸೂರು ಸಿಗುತ್ತಿಲ್ಲ ಎಂದು ಸಂತ್ರಸ್ತರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv