ಮಡಿಕೇರಿ: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಕೆಲ ವ್ಯಕ್ತಿಗಳು ಪ್ರವಾಸ ಕೈಗೊಂಡಿದ್ದು, ರೆಸಾರ್ಟಿನಲ್ಲಿ ಮೋಜು ಮಸ್ತಿ ನಡೆಸಿದ್ದಾರೆ.
ಹೆಮ್ಮಾರಿ ಕೊರೊನಾ ವೈರಸ್ ನಿಯಂತ್ರಿಸಲು ದೇಶವನ್ನು ಲಾಕ್‍ಡೌನ್ ಮಾಡಿ ಜನರು ಮನೆಯಲ್ಲಿರುವಂತೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ. ವೈದ್ಯರು, ಪೊಲೀಸರು ಹಗಲು ರಾತ್ರಿ ಎನ್ನದೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬೆಂಗಳೂರಿನ ಜನರಿಗೆ ಮಾತ್ರ ಇದೆಲ್ಲಕ್ಕಿಂತ ಮೋಜು ಮಸ್ತಿ ಪ್ರವಾಸವೇ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕೆಲ ರೆಸಾರ್ಟ್ ಗಳಿಗೆ ದುಡಿಮೆಯೇ ಮುಖ್ಯವಾಗಿದೆ.
Advertisement
Advertisement
ಸೋಮವಾರಪೇಟೆ ತಾಲೂಕಿನ 7ನೇ ಹೊಸಕೋಟೆ ಸಮೀಪದ ತೊಡೂರಿನಲ್ಲಿರುವ ಪ್ಯಾಡಿಂಗ್ಟನ್ ರೆಸಾರ್ಟ್ ನಲ್ಲಿ ಬೆಂಗಳೂರಿನ ಪ್ರವಾಸಿಗರು ಕಳೆದ ಕೆಲವು ದಿನಗಳಿಂದಲೂ ಮೋಜು ಮಸ್ತಿ ಮಾಡುತ್ತಿದ್ದಾರೆ. ಜೊತೆಗೆ ಪಕ್ಕದಲ್ಲೇ ಇರುವ ಚಿಕ್ಲಿಹೊಳೆ ಜಲಾಶಯಕ್ಕೆ ಸೈಕಲ್, ಜೀಪ್ ಮೂಲಕ ವಿಹಾರಕ್ಕೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ. ಕದ್ದು ಮುಚ್ಚಿ ಹೀಗೆ ಓಡಾಡಿಕೊಂಡಿದ್ದ ವೇಳೆ ಇಂದು ಗ್ರಾಮಸ್ಥರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.
Advertisement
ಜಿಲ್ಲೆಯಲ್ಲಿ ಓರ್ವರಿಗೆ ಕೊರೊನಾ ತಗುಲಿದ್ದರಿಂದ ಜಿಲ್ಲೆಯ ಎಲ್ಲಾ ಗಡಿಗಳನ್ನು ಬಂದ್ ಮಾಡಲಾಗಿತ್ತು. ಜಿಲ್ಲೆಯಿಂದ ಯಾರು ಹೊರ ಹೋಗದಂತೆ ಮತ್ತು ಒಳ ಬರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇಷ್ಟೆಲ್ಲಾ ಆದರೂ ಬೆಂಗಳೂರಿನಿಂದ ಕೆಲವರು ಕೊಡಗಿನ ರೆಸಾರ್ಟಿಗೆ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಅಷ್ಟೇ ಅಲ್ಲದೆ ಪ್ರವಾಸಿಗರಿಗೆ ಆತಿಥ್ಯ ನೀಡಿರುವ ಪ್ಯಾಡಿಂಗ್ಟನ್ ರೆಸಾರ್ಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.