ಮಡಿಕೇರಿ: ವಿದೇಶಿ ಪ್ರಜೆಯೊಬ್ಬರು ಅನುಮಾನಾಸ್ಪದ ರೀತಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ.
ಸ್ಪೇನ್ ದೇಶದ ಕಾರ್ಲೋಸ್(65) ಮೃತ ವಿದೇಶ ಪ್ರಜೆ. ಕಾರ್ಲೋಸ್ ಸೋಮೇಶ್ವರ ಬಡಾವಣೆಯ ಐಟಿಐ ಕಾಲೇಜು ಕಟ್ಟಡದ ಮೇಲ್ಭಾಗದಲ್ಲಿ ಕಳೆದ ಎಂಟು ತಿಂಗಳಿನಿಂದ ಬಾಡಿಗೆಗೆ ವಾಸವಿದ್ದರು. ಆದರೆ ಇಂದು ಅಡುಗೆ ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿ ಶವವಾಗಿ ಕಾಣಿಸಿಕೊಂಡಿದ್ದಾರೆ.
ಸ್ಪೇನ್ ದೇಶದ ನೌಕಾಪಡೆಯ ನಿವೃತ್ತ ಯೋಧ ಕಾರ್ಲೋಸ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 2003ರಲ್ಲಿ ಕೇರಳದಲ್ಲಿ ವಾಸವಿದ್ದ ಕಾರ್ಲೋಸ್ 2008ರಲ್ಲಿ ಕುಶಾಲನಗರಕ್ಕೆ ಬಂದು ಮಕ್ಕಳ ಜೊತೆಗೆ ಸೋಮೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದರು. ಇಲ್ಲಿನ ಟಿಬೆಟಿಯನ್ ಕ್ಯಾಂಪ್‍ನಲ್ಲಿ ಗಿಟಾರ್ ನುಡಿಸಿ ಹಣ ಸಂಪಾದನೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಸ್ಪೇನ್ ಸರ್ಕಾರದಿಂದ ಪಿಂಚಣಿ ಹಣ ಕೂಡ ಪಡೆಯುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಕಳೆದ ಕೆಲ ದಿನಗಳಿಂದ ಕಾರ್ಲೋಸ್ ಮಕ್ಕಳು ಮನೆಯಲ್ಲಿ ಇರಲಿಲ್ಲ. ಆದರೆ ಮನೆಯಿಂದ ಮೃತ ದೇಹ ಕೊಳೆತ ವಾಸನೆ ಬರಲು ಆರಂಭಿಸಿತ್ತು. ಹೀಗಾಗಿ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರ್ಲೋಸ್ ಮದ್ಯ ವ್ಯಸನಿಯಾಗಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಲಗಿದ ಹಾಸಿಗೆ ಮೇಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಯಾರೋ ಕೊಲೆಗೈದು ಅಪರಾರಿಯಾಗಿದ್ದಾರೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.