Connect with us

Districts

ಮಗಳನ್ನು ಅಂಗನವಾಡಿಗೆ ಸೇರಿಸಿದ ಕೊಡಗು ಎಸ್‍ಪಿ

Published

on

ಮಡಿಕೇರಿ: ಕಳೆದ ಎರಡು ವರ್ಷಗಳಿಂದ ಕೊಡಗಿನಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗು ಎಸ್‍ಪಿ ಸುಮನ್.ಡಿ ಪೆನ್ನೇಕರ್ ಅವರು ತಮ್ಮ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳುಹಿಸುವ ಮೂಲಕ ಮಾದರಿಯಾಗಿದ್ದಾರೆ.

ಕನ್ನಡ ಕಲಿಕೆಗೆ ಒತ್ತು, ಗ್ರಾಮೀಣ ಮಕ್ಕಳೊಂದಿಗೆ ಬೆರೆಯುವ ಉದ್ದೇಶದೊಂದಿಗೆ ತಮ್ಮ ಮಗಳು ಖುಷಿಯನ್ನು ಅಂಗನವಾಡಿಗೆ ಸೇರಿಸಿದ್ದಾರೆ. ಮಡಿಕೇರಿ ನಗರದ ಎಫ್‍ಎಂಸಿ ಕಾಲೇಜು ಹಿಂಭಾಗದ ಅಂಗನವಾಡಿಗೆ ಸುಮನ್ ಅವರು ತಮ್ಮ ಮಗಳನ್ನು ಸೇರಿಸಿದ್ದಾರೆ. ದಿನವೂ ಮಗಳನ್ನು ಅಂಗನವಾಡಿಗೆ ಡ್ರಾಪ್ ಮಾಡಿ, ಬಳಿಕ ಎಸ್‍ಪಿ ಅವರು ತಮ್ಮ ಕೆಲಸಕ್ಕೆ ತೆರಳುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ಅಂಗನವಾಡಿಗೆ ಮಗಳನ್ನ ಸೇರಿಸಿದ ಐಎಎಸ್ ಅಧಿಕಾರಿ

ಕಲಿಕೆ, ಆಟ, ಊಟದ ಜೊತೆಗೆ ಮಕ್ಕಳೊಂದಿಗೆ ಈ ಅಂಗನವಾಡಿಯಲ್ಲಿ ಎಸ್‍ಪಿ ಮಗಳು ಸಹ ಬೆರೆಯುತ್ತಿದ್ದಾಳೆ. ಸಾಮಾನ್ಯರ ಮಕ್ಕಳಂತೆ ಸರ್ಕಾರಿ ಅಂಗನವಾಡಿಯಲ್ಲಿ ಎಸ್‍ಪಿ ಪುತ್ರಿ ಖುಷಿ ಸಹ ಪಾಠ ಕಲಿಯುತ್ತಿದ್ದಾಳೆ. ಸಾಮಾನ್ಯವಾಗಿ ಸರ್ಕಾರಿ ಕೆಲಸದಲ್ಲಿ ಇರುವವರ ಮಕ್ಕಳನ್ನು ದುಬಾರಿ ಶಾಲೆಗಳಿಗೆ ಕಳುಹಿಸುತ್ತಾರೆ. ಆದರೆ ಸುಮನ್ ಅವರು ಸರ್ಕಾರಿ ಅಂಗನವಾಡಿಗೆ ಮಗಳನ್ನು ಸೇರಿಸಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಅಂಗನವಾಡಿ ಶಿಕ್ಷಕಿ ನೀತು ಮಾತನಾಡಿ, ಗ್ರಾಮೀಣ ಪೊಲೀಸ್ ಠಾಣೆಗೆ ಅಂಗನವಾಡಿ ಹತ್ತಿರವಾಗಿದೆ. ಸೋಮವಾರ ಎಸ್.ಪಿ ಅವರು ತಮ್ಮ ಮಗಳನ್ನು ಅಂಗನವಾಡಿಗೆ ದಾಖಲಿಸಿದ್ದಾರೆ. ಅವರ ಮಗಳು ಮಾತ್ರವಲ್ಲದೆ ಪೊಲೀಸ್ ಇನ್‍ಸ್ಪೆಕ್ಟರ್ ಮಗು ಸೇರಿದಂತೆ ಇತರೆ 5 ಮಂದಿ ಪೊಲೀಸ್ ಸಿಬ್ಬಂದಿಯ ಮಕ್ಕಳು ಕೂಡ ಇಲ್ಲಿ ದಾಖಲಾತಿ ಪಡೆದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮಗಳನ್ನು ಅಂಗನವಾಡಿಗೆ ಸೇರಿಸಿದ್ರು ಐಎಎಸ್ ಅಧಿಕಾರಿ- ಕನ್ನಡತಿಯ ನಿರ್ಧಾರಕ್ಕೆ ಜನರ ಮೆಚ್ಚುಗೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕಿ ಕೆ. ರಾಧಾ ಅವರು ಮಾತನಾಡಿ, ಪ್ರಸ್ತುತವಾಗಿ ಮಡಿಕೇರಿಯಲ್ಲಿ 20 ಅಂಗನವಾಡಿ ಕೇಂದ್ರಗಳು ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಒಟ್ಟು 871 ಅಂಗನವಾಡಿ ಕೇಂದ್ರಗಳು ಇವೆ. ಇವುಗಳಲ್ಲಿ ಈ ವರ್ಷ ಸುಮಾರು 8 ಸಾವಿರ ಮಕ್ಕಳು ದಾಖಲಾತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಎಸ್.ಪಿ ಸುಮನ್ ಅವರು ಮಗಳನ್ನು ಅಂಗನವಾಡಿಗೆ ಸೇರಿಸಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದುಮಾಡುತ್ತಿದೆ. ಈ ಬಗ್ಗೆ ತಿಳಿದ ಸಾಕಷ್ಟು ಮಂದಿ ಅಂಗನವಾಡಿಗೆ ಭೇಟಿ ಕೊಟ್ಟು ಖುಷಿ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಂಗನವಾಡಿ ಸಿಬ್ಬಂದಿ ತಿಳಿಸಿದರು. ಎಫ್‍ಎಂಸಿ ಕಾಲೇಜು ಹಿಂಭಾಗದ ಅಂಗನವಾಡಿಯಲ್ಲಿ 7 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 17 ಮಕ್ಕಳಿದ್ದಾರೆ. ಇದು ಅಂಗನವಾಡಿಯಲ್ಲಿ ಮಕ್ಕಳಿಗೆ ಒಳ್ಳೆಯ ಸೌಲಭ್ಯ ಒದಗಿಸಲಾಗುತ್ತಿದೆ. ಖಾಸಗಿ ಪ್ರೀ-ನರ್ಸರಿ ಶಾಲೆಗಳಿಗೆ ಹೋಲಿಸಿದರೆ ಈ ಅಂಗನವಾಡಿ ಯಾವುದರಲ್ಲೂ ಕಡಿಮೆ ಇಲ್ಲ ಎಂದು ಸ್ಥಳೀಯರು ಹೇಳಿದರು.

Click to comment

Leave a Reply

Your email address will not be published. Required fields are marked *