ಮಡಿಕೇರಿ: ಕರ್ತವ್ಯನಿರತ ಅರಣ್ಯಾಧಿಕಾರಿಯೊಬ್ಬರನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು 23 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಪಾಣತ್ತಿಲ್ ನಿವಾಸಿ ಜಾರ್ಜ್ ಕುಟ್ಟಿ (54) ಬಂಧಿತ ಆರೋಪಿ. ಪೊನ್ನಪ್ಪ ಕೊಲೆಯಾಗಿದ್ದ ಅರಣ್ಯಾಧಿಕಾರಿ. 1997ರಲ್ಲಿ ಮಾಕುಟ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿತ್ತು.
1997ರಲ್ಲಿ ಐದು ಜನರ ಗುಂಪೊಂದು ಪ್ರಾಣಿಗಳನ್ನು ಬೇಟೆಯಾಡಲು ಮಾಕುಟ ಅರಣ್ಯ ಪ್ರದೇಶಕ್ಕೆ ಬಂದಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಅರಣ್ಯಾಧಿಕಾರಿ ಪೊನ್ನಪ್ಪ ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದರು. ತಪ್ಪಿಸಿಕೊಳ್ಳಲು ಮುಂದಾದ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ಗುಂಡು ತಗುಲಿ ಪೊನ್ನಪ್ಪ ಮೃತಪಟ್ಟಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದ್ದ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಆದರೆ ಎರಡನೇ ಆರೋಪಿ ಜಾರ್ಜ್ ಕುಟ್ಟಿ ತಲೆಮರಿಸಿಕೊಂಡಿದ್ದ. ಕೆಲ ದಿನಗಳ ಹಿಂದೆಯಷ್ಟೇ ಕೇರಳದ ನಿವಾಸಿಯೊಬ್ಬರು ಆರೋಪಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಬಂಧನಕ್ಕೆ ಪ್ಲಾನ್ ರೂಪಿಸಿದ ಅಧಿಕಾರಿಗಳು ಕೇರಳ ರಾಜ್ಯದ ಪಾಣತ್ತಿಲ್‍ಗೆ ಹೋಗಿ ಆರೋಪಿ ಜಾರ್ಜ್ ಕುಟ್ಟಿಯನ್ನು ಬಂಧಿಸಿದ್ದಾರೆ.