ಮಡಿಕೇರಿ: ಫಸಲಿಗಾಗಿ ಕಾಯುತ್ತಿದ್ದ ಕೃಷಿಕ ವರ್ಗ ಇದೀಗ ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವತ್ತ ಚಿತ್ತ ಹರಿಸಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಾದ್ಯಂತ ಭತ್ತ ಕೊಯ್ಲು ಭರದಿಂದ ಸಾಗುತ್ತಿದೆ. ಕಟಾವು ಮಾಡಿದ ಭತ್ತವನ್ನು ಬಡಿದು, ‘ಹಡ್ಲು ಹೊಡೆಯುವ’ (ಹುಲ್ಲಿನಿಂದ ಭತ್ತವನ್ನು ಬೇರ್ಪಡಿಸುವದು) ಕಾರ್ಯ ಎಲ್ಲೆಡೆ ಕಂಡುಬರುತ್ತಿದೆ. ಕಳೆದ ಒಂದು ತಿಂಗಳಿನಿಂದ ಅಕಾಲಿಕ ಮಳೆ ಹಾಗೂ ಮೋಡದ ವಾತಾವರಣದಿಂದ ಭತ್ತ ಕೊಯ್ಲ ಹಾಗೂ ಕಾಫಿ ಕೊಯ್ಲು ವಿಳಂಬವಾಗಿತ್ತು. ಕಳೆದ ಎರಡು ವಾರದಿಂದ ಸೋಮವಾರಪೇಟೆ ತಾಲೂಕಿನಲ್ಲಿ ಬಿಸಿಲಿನ ವಾತಾವರಣವಿದ್ದು, ಕಾಫಿ ಕೊಯ್ಲು ಭರದಿಂದ ಸಾಗುತ್ತಿರುವ ಮಧ್ಯೆಯೇ ಭತ್ತದ ಕೊಯ್ಲು ಸಹ ಬಿರುಸು ಪಡೆದುಕೊಂಡಿದೆ.
Advertisement
Advertisement
ಸ್ಥಳೀಯ ಕಾರ್ಮಿಕರು ಭತ್ತದ ಕೊಯ್ಲು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೆ, ಹೊರ ಜಿಲ್ಲೆಗಳಿಂದ ಆಗಮಿಸಿರುವ ಕಾರ್ಮಿಕರು ಕಾಫಿ ಕೊಯ್ಲಿನಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಭತ್ತ ಕೊಯ್ಲಿನ ಸಂದರ್ಭದಲ್ಲಿ ಬಯಲುಸೀಮೆಯಿಂದ ಕಾರ್ಮಿಕರ ತಂಡಗಳು ಗ್ರಾಮಗಳಿಗೆ ಬಂದು ತಿಂಗಳುಗಟ್ಟಲೇ ವಾಸ್ತವ್ಯ ಹೂಡಿ ಭತ್ತದ ಕೆಲಸ ಮುಗಿಸಿ ಹೋಗುತ್ತಿದ್ದರು. ಇದೀಗ ಅಂತಹ ಕಾರ್ಮಿಕರು ಕಾಫಿ ಕೊಯ್ಲಿನತ್ತ ಹೆಚ್ಚಿನ ಆಸಕ್ತಿ ವಹಿಸಿರುವ ಪರಿಣಾಮ ಸ್ಥಳೀಯ ಕಾರ್ಮಿಕರನ್ನೇ ಭತ್ತದ ಕೊಯ್ಲಿಗೆ ನೆಚ್ಚಿಕೊಳ್ಳುವಂತಾಗಿದೆ.
Advertisement
Advertisement
ಇನ್ನು ಗ್ರಾಮೀಣ ಭಾಗದಲ್ಲಿ ಸ್ಥಳೀಯರೇ ಹೊಂದಾಣಿಕೆಯಿಂದ ಭತ್ತದ ಕೊಯ್ಲಿನಲ್ಲಿ ತೊಡಗಿಸಿಕೊಂಡಿದ್ದಾರೆ. ‘ಮುಯ್ಯಾಳು’ ಮಾದರಿಯಲ್ಲಿ ಕೆಲಸ ನಡೆಯುತ್ತಿದೆ. ತಾಲೂಕಿನಲ್ಲಿ 9240 ಹೆಕ್ಟೇರ್ ನಲ್ಲಿ ಭತ್ತ ಕೃಷಿ ಮಾಡಲಾಗಿದೆ. ತುಂಗ, ತನು, ಐ.ಆರ್.64, ಬಾಂಗ್ಲಾ ರೈಸ್, ಅತೀರಾ ತಳಿಗಳು ಈಗಾಗಲೇ ಕೊಯ್ಲಿಗೆ ಬಂದಿವೆ. ಶಾಂತಳ್ಳಿ ಹೋಬಳಿಯ ಕೊತ್ನಳ್ಳಿ, ಕುಡಿಗಾಣ, ಮಲ್ಲಳ್ಳಿ, ನಾಡ್ನಳ್ಳಿ, ಬೆಂಕಳ್ಳಿ, ಕೂತಿ, ತೋಳೂರುಶೆಟ್ಟಳ್ಳಿ, ಯಡೂರು, ಹುದುಗೂರು, ಯಡವನಾಡು, ಮದಲಾಪುರ, ಅಬ್ಬೂರುಕಟ್ಟೆ, ಗಣಗೂರು, ಗೋಣಿಮರೂರು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಕೊಯ್ಲು ಬಿರುಸುಗೊಂಡಿದೆ.