ನಿರಾಶ್ರಿತರನ್ನ ಒಕ್ಕಲೆಬ್ಬಿಸಲು ಜಿಲ್ಲಾಡಳಿತ ಪ್ಲಾನ್!- 11ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

Public TV
2 Min Read
MKD PROTEST

ಮಡಿಕೇರಿ: ನಿವೇಶನಕ್ಕೆ ಆಗ್ರಹಿಸಿ ನಿರಾಶ್ರಿತ ಆದಿವಾಸಿ, ದಲಿತ 55 ಕುಟುಂಬಗಳು ನಡೆಸುತ್ತಿರುವ ಆಹೋರಾತ್ರಿ ಧರಣಿ 11ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ತಿರುಗಿಯೂ ನೋಡದ ಅಧಿಕಾರಿ ವರ್ಗ, ಇದೀಗ ಪ್ರತಿಭಟನಾ ಸ್ಥಳಕ್ಕೆ ಭೇಟಿಕೊಟ್ಟಿದ್ದು, ಪ್ರತಿಭಟನಾಕಾರರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಆದರೆ ಪ್ರತಿಭಟನಾಕಾರರು ನಿವೇಶನ ಸಿಗೋವರೆಗೆ ನಿರಂತರ ಧರಣಿ ನಡೆಸುವುದಾಗಿ ಪಟ್ಟುಹಿಡಿದು ಕುಳಿತಿದ್ದಾರೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡಿನ ಪರಂಬು ಪೈಸಾರಿ ಜಾಗದಲ್ಲಿ ನಿವೇಶನ ರಹಿತ ಆದಿವಾಸಿ, ದಲಿತ ಹಾಗೂ ಇತರೆ ಹಿಂದುಳಿದ ಸಮುದಾಯದ 55 ಕುಟುಂಬಗಳು ನಡೆಸುತ್ತಿರುವ ಆಹೋರಾತ್ರಿ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ಕಡಕೊಲ್ಲಿಯ ಸರ್ವೇ ನಂಬರ್ 337/1 ರ ಸರ್ಕಾರಿ ಪೈಸಾರಿ ಜಾಗದಲ್ಲಿ ಪ್ರತಿಭಟನಾಕಾರರು ಹಾಕಿದ್ದ ಗುಡಿಸಲುಗಳನ್ನು ಜನವರಿ 5 ರಂದು ಕಂದಾಯ ಅಧಿಕಾರಿಗಳು ಕಿತ್ತೆಸೆದಿದ್ದರು. ಇದನ್ನು ಖಂಡಿಸಿ ಹಾಗೂ ನಿವೇಶನಕ್ಕಾಗಿ ಅಂದಿನಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಸ್ಥಳದಲ್ಲಿಯೇ ಅಡುಗೆ ಮಾಡಿ ಪ್ರತಿಭಟನಾಕಾರರು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ.

MKD PROTEST a

ಇಂದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಹೇಶ್ ಪ್ರತಿಭಟನಾಕಾರರನ್ನು ಅಲ್ಲಿಂದಲೂ ಹೊರದಬ್ಬಲು ಪ್ಲಾನ್ ರೂಪಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿರುವವರು ಬೇರೆ ಬೇರೆ ಪಂಚಾಯಿತಿ ವ್ಯಾಪ್ತಿಯವರಾಗಿದ್ದು, ಅವರು ಆಯಾ ಪಂಚಾಯಿತಿಗಳಲ್ಲೇ ಅರ್ಜಿ ಸಲ್ಲಿಸಲಿ. ಬಳಿಕ ಅವರಿಗೆ ಅಲ್ಲಿಯೇ ಅವರಿಗೆ ನಿವೇಶನ ಕೊಡಲಾಗುವುದು ಎನ್ನುತ್ತಿದ್ದಾರೆ. ಆದರೆ ನಿವೇಶನ ಸಿಗೋವರೆಗೆ ಇಲ್ಲಿಂದ ಕದಲೋದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದು ಕುಳಿತಿದ್ದಾರೆ.

ಗುಡಿಸಲುಗಳನ್ನು ಕಿತ್ತೆಸೆದಿದ್ದ ಜಾಗದಲ್ಲೇ ಪ್ರತಿಭಟನಾಕಾರರು ಮತ್ತೆ ಗುಡಿಸಲು ಕಟ್ಟಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿರುವ ಕುಟುಂಬಗಳ ಮಾಹಿತಿ ಪಡೆದುಕೊಂಡರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ಸರ್ಕಾರಿ ಜಾಗದಲ್ಲಿ ಶೆಡ್ಡು ಹಾಕಿದ್ರೆ ಕಿತ್ತು ಬಿಸಾಡಿ ಹೋದವರು ಇಂದು ಬಂದಿದ್ದೀರಾ. ಇದೀಗ ಬಂದಿರುವುದಾದ್ರೂ ನಿವೇಶನ ನೀಡುವ ಭರವಸೆ ನೀಡುತ್ತಿಲ್ಲ. ಬದಲಾಗಿ ಆಯಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಲಿ. ಬಳಿಕ ಪರಿಶೀಲನೆ ಮಾಡುತ್ತೇವೆ ಎಂದು ಹೇಳುತ್ತಿದ್ದೀರಾ. ಇಂತಹ ಭರವಸೆಗಳನ್ನು 20 ವರ್ಷಗಳಿಂದ ಕೇಳಿ ಸಾಕಾಗಿ ಹೋಗಿದೆ. ಹೀಗಾಗಿ ನಮಗೇ ಇದೇ ಸ್ಥಳದಲ್ಲಿ ನಿವೇಶ ಸಿಗೋವರೆಗೆ ಸ್ಥಳ ಬಿಟ್ಟು ಕದಲೋದಿಲ್ಲ ಎಂದಿದ್ದಾರೆ.

MKD PROTEST b

Share This Article
Leave a Comment

Leave a Reply

Your email address will not be published. Required fields are marked *