ಕೊಡಗಿನ ದಿಡ್ಡಳ್ಳಿಯ ಆದಿವಾಸಿ ಬುಡಕಟ್ಟು ಮಾದರಿಯಲ್ಲೇ ಮತ್ತೊಂದು ಹೋರಾಟಕ್ಕೆ ಸಿದ್ಧತೆ

Public TV
2 Min Read
KODAGU MDK PROTEST

ಮಡಿಕೇರಿ: ಕಳೆದ ನಾಲ್ಕು ವರ್ಷಗಳ ಹಿಂದೆ ದೇಶದ ಗಮನವನ್ನೇ ಸೆಳೆದಿದ್ದ ಕೊಡಗಿನ ದಿಡ್ಡಳ್ಳಿಯ ಆದಿವಾಸಿ ಬುಡಕಟ್ಟು ಜನರ ಹೋರಾಟ ಇನ್ನೂ ಮಾಸಿಲ್ಲ. ಆಗಲೇ ಇದೇ ಮಾದರಿಯ ಮತ್ತೊಂದು ಹೋರಾಟವನ್ನು ಬುಡಕಟ್ಟು ಮತ್ತು ದಲಿತ ಸಮುದಾಯದ 40 ಕುಟುಂಬಗಳು ನಡೆಸುತ್ತಿವೆ. ಆಹೋರಾತ್ರಿಯ ಈ ಹೋರಾಟಕ್ಕೆ ಅಧಿಕಾರಿಗಳು ಮಾತ್ರ ದರ್ಪ ತೋರಿಸುತ್ತಿದ್ದಾರೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡಿನಲ್ಲಿ. 2016 ರಲ್ಲಿ ದಿಡ್ಡಳ್ಳಿಯ ಆದಿವಾಸಿ ಬುಡಕಟ್ಟು ಜನರು ಸ್ವಂತ ಸೂರಿಗಾಗಿ ಆಹೋರಾತ್ರಿ ಮತ್ತು ಬೆತ್ತಲೆ ಹೋರಾಟ ಮಾಡಿ ಇಡೀ ದೇಶದ ಗಮನಸೆಳೆದಿದ್ದರು. ಇದೀಗ ಪೆರಂಬಾಡಿ, ಕೆದಮುಳ್ಳೂರು, ಬಿಟ್ಟಂಗಾಲ, ಆರ್ಜಿ ಪಂಚಾಯಿತಿ ವ್ಯಾಪ್ತಿಯ 40 ದಲಿತ ಮತ್ತು ಆದಿವಾಸಿ ಬುಡಕಟ್ಟು ಸಮುದಾಯದ ಕುಟುಂಬಗಳು ಹೋರಾಟ ನಡೆಸುತ್ತಿವೆ. ಬಾಳುಗೋಡಿನ ಸರ್ವೇನಂಬರ್ 337/1 ರಲ್ಲಿರುವ 30 ಎಕರೆ ಸರ್ಕಾರಿ ಪೈಸಾರಿ ಜಾಗದ ಪೈಕಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಕಳೆದ ಐದು ದಿನಗಳ ಹಿಂದೆ ಗುಡಿಸಲು ನಿರ್ಮಿಸಿ ವಾಸಿಸಲು ಮುಂದಾಗಿದ್ದರು.

KODAGU MDK PROTEST a

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋದ ವಿರಾಜಪೇಟೆ ಕಂದಾಯ ಅಧಿಕಾರಿ ಮತ್ತು ಪಂಚಾಯಿತಿಯ ಅಧಿಕಾರಿಗಳು ಗುಡಿಸಲುಗಳನ್ನು ಕಿತ್ತೆಸೆದು ದರ್ಪ ಮೆರೆದಿದ್ದಾರೆ. ಹೀಗಾಗಿ ಅಷ್ಟು ಕುಟುಂಬಗಳು ನಮಗೆ ಸ್ವಂತ ಮನೆ ನಿರ್ಮಿಸಿಕೊಡುವವರಗೆ ಎಲ್ಲಾ ರೀತಿಯ ಹೋರಾಟಕ್ಕೆ ಸಿದ್ಧರಿದ್ದೇವೆ ಎನ್ನುತ್ತಿದ್ದಾರೆ.

ತಂದೆ ಅಜ್ಜನ ಕಾಲದಿಂದಲೂ ಕಾಫಿ ಎಸ್ಟೇಟ್‍ನ ಲೈನ್‍ಮನೆಯಲ್ಲೇ ಬೆಳೆದಿದ್ದೇವೆ. ಅಲ್ಲಿಯ ಸಮಸ್ಯೆಗಳನ್ನು ಅನುಭವಿಸಿ ಹಲವು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿದ್ದೇವೆ. ಬಾಡಿಗೆ ಕಟ್ಟೋದಕ್ಕೆ ನಮ್ಮ ಬಳಿ ಹಣವೂ ಇಲ್ಲದೆ ಸೂರು ಕಲ್ಪಿಸಿಕೊಡುವಂತೆ ಹತ್ತು ವರ್ಷಗಳಿಂದ ಪಂಚಾಯಿತಿಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದೇವೆ. ಖಾಲಿ ಇರುವ ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಿದರೆ ಅಧಿಕಾರಿಗಳು ಬಂದು ಎಲ್ಲವನ್ನು ಕಿತ್ತೆಸೆದು ದರ್ಪ ಮೆರೆಯುತ್ತಿದ್ದಾರೆ. ನಮಗೆ ಸ್ವಂತ ಸೂರು ನಿರ್ಮಿಸಿಕೊಡದ ಹೊರತ್ತು ಇಲ್ಲಿಂದ ಹೋಗೋದಿಲ್ಲ ಅಂತಾ ಪಟ್ಟು ಹಿಡಿದು ಕುಳಿತಿದ್ದಾರೆ.

ಅಧಿಕಾರಿಗಳು ಮಾತ್ರ ಇದು ಸರ್ಕಾರಿ ಜಾಗ, ಅಲ್ಲಿ ಸ್ಮಶಾನಕ್ಕೆ ಜಾಗ ಕೊಡಬೇಕಾಗಿದೆ. ಜೊತೆಗೆ ವಿರಾಜಪೇಟೆ ನಗರದ ಕಸವಿಲೇವಾರಿಗೆ ಜಾಗಕೊಡಬೇಕಾಗಿದೆ. ಹೀಗಾಗಿ ಆ ಸ್ಥಳದಲ್ಲಿ ಯಾರನ್ನೂ ಕೂರಲು ಬಿಡುವುದಿಲ್ಲ. ಒಂದು ವೇಳೆ ಅವರ ಪ್ರತಿಭಟನೆ ಮುಂದುವರಿದು ಕುಳಿತರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಎಲ್ಲೆಲ್ಲಿಂದಲೋ ಜನರು ಬಂದು ಕುಳಿತಿದ್ದಾರೆ. ಅವರೆಲ್ಲರ ಪೂರ್ವಾಪರ ಪರಿಶೀಲನೆ ಮಾಡಿ, ಒಂದು ವೇಳೆ ನಿಜವಾಗಿಯೂ ಅವರು ನಿರಾಶ್ರಿತರೇ ಆಗಿದ್ದರೆ, ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಕೊಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *