ಮಡಿಕೇರಿ: ವರುಣನ ಅಬ್ಬರಕ್ಕೆ ಕೊಡಗಿನಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ. ಈವರೆಗೆ 7 ಜನರು ಮೃತಪಟ್ಟಿದ್ದು, 8 ಮಂದಿ ಕಣ್ಮರೆಯಾಗಿದ್ದಾರೆ. ಕುಶಾಲನಗರದ ಕೊಪ್ಪ ಬಳಿ ಕಾವೇರಿ ನದಿಗೆ ಕಟ್ಟಲಾದ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಕುಶಾಲನಗರ- ಮೈಸೂರು ಸಂಪರ್ಕಿಸುವ ಹೆದ್ದಾರಿ ಬಂದ್ ಆಗಿದೆ.
ಚಾರ್ಮಾಡಿ ಘಾಟಿ ಈಗಾಗಲೇ ಕುಸಿದಿದೆ. ಇಂದು ಸಕಲೇಶಪುರದ ಬಳಿ ಗುಡ್ಡ ಕುಸಿದ ಪರಿಣಾಮ ಮಡಿಕೇರಿ ಮೂಲಕ ಮಂಗಳೂರಿಗೆ ಹೋಗಬಹುದಾಗಿತ್ತು. ಆದರೆ ಈಗ ಕೊಪ್ಪ ಸೇತುವೆ ಮುಳುಗಡೆಯಾಗಿದೆ. ಕೊಡಗಿನಲ್ಲಿ ಮಳೆ ಜಾಸ್ತಿ ಆಗುತ್ತಿದೆ. ಮಳೆ ನಿಂತರೆ ಮಾತ್ರ ಸೇತುವೆಯ ಮೂಲಕ ಸಂಚಾರ ಮಾಡಬಹುದಾಗಿದೆ.
Advertisement
ತೋರ ಗ್ರಾಮದ ತಾಯಿ ಮಮತಾ(40) ಹಾಗೂ ಮಗಳು ಲಿಖಿತ(15) ಮೃತರು ದುರ್ದೈವಿಗಳು. ಹರೀಶ್ ಕುಟುಂಬದ ನಾಲ್ವರು, ಪ್ರಭು ಕುಟುಂಬದ ನಾಲ್ವರು ಕಣ್ಮರೆಯಾಗಿದ್ದಾರೆ. ಈವರೆಗೆ ಎನ್‍ಡಿಆರ್ ಎಫ್, ಆರ್ಮಿ, ಪೊಲೀಸ್ ತಂಡವು ತೋರ ಗ್ರಾಮದಲ್ಲಿ 300 ಕುಟುಂಬಗಳನ್ನು ರಕ್ಷಣೆ ಮಾಡಿದೆ. ಆದರೆ ಪ್ರತಿಕೂಲ ಹವಾಮಾನ ಉಂಟಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಶನಿವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಮಡಿಕೇರಿಯಲ್ಲಿ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು, ಎಲ್ಲಾ ತಾಲೂಕು ಅಧಿಕಾರಿಗಳಿಗೆ ಪರಿಹಾರ ಕಾರ್ಯಕೈಗೊಳ್ಳಲು 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕುಶಾಲನಗರ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ತಲಾ 10 ಲಕ್ಷ ರೂ. ನೀಡಲಾಗಿದೆ. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಬೋಟ್ ನಿಂದ ಜನರ ಸ್ಥಳಾಂತರಕ್ಕೆ ಸಾಧ್ಯವಾಗದಿದ್ದರೆ ಏರ್ ಲಿಫ್ಟ್ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಪರಿಹಾರ ಕಾರ್ಯ ಕೈಗೊಳ್ಳಲು 100 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದರು.
Advertisement
ಜಿಲ್ಲೆಯಲ್ಲಿ ಇದುವರೆಗೂ 25 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 604 ಕುಟುಂಬಗಳ ಒಟ್ಟು 2,136 ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. 58 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, 14 ಕಡೆಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಭಾಗಮಂಡಲದ ಸಮೀಪ ಸಂಭವಿಸಿದ ಭೂಕುಸಿತದಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿ, ಮೃತ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು.