ಮಡಿಕೇರಿ: ವಿಶ್ವಾದ್ಯಂತ ಮಾರಣಾಂತಿಕ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಪ್ರಕರಣ ಪತ್ತೆಯಾಗದಿದ್ದರೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಈಗಾಗಲೇ ಕೊಡಗು ಜಿಲ್ಲಾಸ್ಪತ್ರೆಯಲ್ಲಿ 6 ಬೆಡ್‍ಗಳ ವಿಶೇಷ ವಾರ್ಡ್, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲೂಕು ಆಸ್ಪತ್ರೆಯಲ್ಲೂ ತಲಾ ಎರಡು ಬೆಡ್‍ಗಳ ಒಂದೊಂದು ವಿಶೇಷ ವಾರ್ಡ್ ಸಿದ್ಧಗೊಳಿಸಲಾಗಿದೆ. ಕೇರಳ, ಅಸ್ಸಾಂ ಸೇರಿದಂತೆ ಹೊರರಾಜ್ಯಗಳಿಂದ ಕಾರ್ಮಿಕರು ಕೊಡಗಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಕೊಡಗಿನ ಕಾಫಿ ತೋಟದ ಮಾಲೀಕರಿಗೂ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಅಲ್ಲದೆ ಕೇರಳ ರಾಜ್ಯದಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂಕಿತ 3 ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಮುಂದಿನ 15 ದಿನಗಳ ಕಾಲ ಕೇರಳದಿಂದ ಯಾವುದೇ ಕಾರ್ಮಿಕರನ್ನು ಕರೆತರುವಂತಿಲ್ಲ ಮತ್ತು ಇಲ್ಲಿರುವ ಕಾರ್ಮಿಕರನ್ನು ಕಳುಹಿಸದಂತೆ ಆರೋಗ್ಯ ಇಲಾಖೆ ಸೂಚಿಸಿ, ನೋಟಿಸ್ ನೀಡಿದೆ.
ಕೊಡಗು ಪ್ರವಾಸಿ ತಾಣಗಳ ಜಿಲ್ಲೆಯಾಗಿದ್ದು, ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುವುದರಿಂದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಅರಿವು ಮೂಡಿಸಲು ಬಿತ್ತಿಪತ್ರಗಳನ್ನು, ಕರಪತ್ರಗಳನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.