ಮಡಿಕೇರಿ: ದುಬಾರೆ ಶಿಬಿರದಲ್ಲಿ ಸಾಕಾನೆಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಬೇರೆಡೆ ಹೊಸ ಶಿಬಿರ ಶೀಘ್ರವೇ ತಲೆ ಎತ್ತಲಿದೆ. ಅದಕ್ಕಾಗಿ ಯೋಜನೆ ರೂಪಿಸಲಾಗಿದ್ದು, ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಕೂಡ ನಡೆಯುತ್ತಿದೆ.
Advertisement
ರಾಜ್ಯದಲ್ಲಿ ಮತ್ತೊಂದು ಸಾಕಾನೆ ಶಿಬಿರ ಆರಂಭಕ್ಕೆ ಸಿದ್ಧತೆ ನಡೆದಿದೆ. ಕೊಡಗಿನ ಹಾರಂಗಿ ಜಲಾಶಯ ಬಳಿ ತಲೆ ಎತ್ತಲಿರುವ ಈ ಶಿಬಿರಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮೊದಲ ಹಂತದಲ್ಲಿ 70 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಸದ್ಯದಲ್ಲೆ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ದೇವಸ್ಥಾನದ ಪ್ರಸಾದ ಸೇವಿಸಿ 30 ಮಂದಿ ಅಸ್ವಸ್ಥ
Advertisement
ಹೌದು, ಕೊಡಗು ಜಿಲ್ಲೆಯಲ್ಲಿ ದುಬಾರೆ ಸಾಕಾನೆ ಶಿಬಿರದಲ್ಲಿ ಸುಮಾರು 31 ಸಾಕಾನೆಗಳು ಇದೆ. ರಾಜ್ಯದ ಸಾಕಾನೆ ಶಿಬಿರಗಳಲ್ಲಿ ಆನೆಗಳ ಅಸ್ವಾಭಾವಿಕ ಸಾವಿನ ಬಗ್ಗೆ ತನಿಖೆ ನಡೆಸಲು ರಚನೆಯಾಗಿದ್ದ ತಜ್ಞರ ಸಮಿತಿ ಕುಶಾಲನಗರ ತಾಲೂಕು ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿದ್ದ ವೇಳೆ ಇಲ್ಲಿ ಮರಿಗಳು ಸೇರಿದಂತೆ 32 ಆನೆಗಳು ಇರುವುದನ್ನು ಗಮನಿಸಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಸಂಬಂಧ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದಲ್ಲದೆ, ಒಂದು ಶಿಬಿರದಲ್ಲಿ 15ಕ್ಕೂ ಹೆಚ್ಚು ಆನೆಗಳು ಇರುವಂತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
Advertisement
Advertisement
ಈ ಹಿನ್ನೆಲೆಯಲ್ಲಿ ಕುಶಾಲ ನಗರ ಅರಣ್ಯ ಅತ್ತೂರು ಶಾಖೆಗೆ ಸೇರಿದ ಹಾರಂಗಿ ಟ್ರೀ ಪಾರ್ಕ್ ಬಳಿ ಹೊಸ ಸಾಕಾನೆ ಶಿಬಿರ ಆರಂಭಿಸಲು 2021ರ ಫೆಬ್ರವರಿ 12ಕ್ಕೆ ಸರ್ಕಾರ ಅನುಮತಿ ನೀಡಿದೆ. 40 ಎಕರೆ ಪ್ರದೇಶದಲ್ಲಿ ಟ್ರೀ ಪಾರ್ಕ್ ಇದ್ದು, ಈ ಪೈಕಿ ಸುಮಾರು 15 ಎಕರೆ ಪ್ರದೇಶವನ್ನು ಸಾಕಾನೆ ಶಿಬಿರಕ್ಕೆ ಬಳಸಿಕೊಳ್ಳಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಇದನ್ನೂ ಓದಿ: ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ, ಯತ್ನಾಳ್ ರಹಸ್ಯ ಸಮಾಲೋಚನೆ!
ಮೊದಲ ಹಂತದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ 70 ಲಕ್ಷ ರೂ. ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಈ ಮೊತ್ತವನ್ನು ಕೊಡಗು ಮಾನವ-ವನ್ಯಪ್ರಾಣಿ ಸಂಘರ್ಷ ಉಪಶಮನ ಪ್ರತಿಷ್ಠಾನ ನಿಧಿಯಡಿ ಬಳಸಿಕೊಳ್ಳಲು ಆರಂಭದಲ್ಲಿ ನಿರ್ಧರಿಸಲಾಗಿತ್ತಾದರೂ, ಈ ನಿಧಿಯಲ್ಲಿ ಸೂಕ್ತ ಮೊತ್ತ ಇಲ್ಲದ ಕಾರಣ ‘ಕಾಂಪ’ (ಕಾಂಪನ್‍ಸೇಟರಿ ಆಫಾರೆಸ್ಟೇಷನ್ ಫಂಡ್ ಮ್ಯಾನೇಜ್‍ಮೆಂಟ್ ಫಂಡ್ ಪ್ಲ್ಯಾನಿಂಗ್ ಅಥಾರಿಟಿ) ಲೆಕ್ಕ ಶೀರ್ಷಿಕೆ ಅಡಿ ಅಗತ್ಯ ಹಣದ ಬಳಕೆ ಆಗಲಿದೆ. ಆರಂಭದಲ್ಲಿ ಮಾವುತರು, ಕಾವಾಡಿಗರಿಗೆ ಉಳಿದುಕೊಳ್ಳಲು ವಸತಿ ಗೃಹಗಳು, ಸ್ಟೋರ್ ರೂಂ, ಆನೆಗಳಿಗೆ ಆಹಾರ ತಿನ್ನಿಸುವ ಪ್ರದೇಶ, ಔಷಧ ಒದಗಿಸುವ ಪ್ರದೇಶ. ಹೀಗೆ ಮೂಲ ಅಗತ್ಯದ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಮುಂದಿನ ಹಂತದಲ್ಲಿ ಇತರ ಕಾಮಗಾರಿಗಳನ್ನು ನಡೆಸಲು ನಿರ್ಧರಿಸಲಾಗಿದೆ.
ರಾಜ್ಯದ ವಿವಿಧೆಡೆ ಸಾಕಾನೆ ಶಿಬಿರಗಳಿದ್ದು, ಅವುಗಳಲ್ಲಿ ಒಂದು ಸಾಕಾನೆ ಶಿಬಿರದಲ್ಲಿ 15 ಆನೆಗಳಿಗಿಂತ ಹೆಚ್ಚು ಸಾಕಾನೆಗಳಿದ್ದರೆ ಹೊಸ ಶಿಬಿರವನ್ನು ಆರಂಭಿಸುವಂತೆ ರಾಜ್ಯ ಹೈಕೋರ್ಟ್ ಸೂಚಿಸಿದೆ. ಕೊಡಗಿನ ಕುಶಾಲನಗರ ವಲಯದ ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರಸ್ತುತ 31 ಸಾಕಾನೆಗಳಿವೆ. ಹೀಗಾಗಿ ಕೂಡಲೇ ಮತ್ತೊಂದು ಶಿಬಿರವನ್ನು ಆರಂಭಿಸುವಂತೆ ಸಾಕಾನೆ ಶಿಬಿರಗಳ ಸ್ಥಿತಿಗತಿ ಅರಿಯಲು ಹೈಕೋರ್ಟ್ ನೇಮಿಸಿದ್ದ ಸಮಿತಿ 2020 ಅಕ್ಟೋಬರ್‍ನಲ್ಲೇ ವರದಿ ನೀಡಿತ್ತು.