ಕೊಡಗು: ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್ ಶ್ರೀಕಂಠಯ್ಯ ಕಳೆದ ವರ್ಷದ ನೆರೆ ಕಾಮಗಾರಿಗಾಗಿ ಬಂದಿದ್ದ ಹಣವನ್ನು ದುರುಪಯೋಗ ಮಾಡಿದ್ದಾರೆ ಎನ್ನುವುದು ಸುಳ್ಳು. ಆ ಹಣದಲ್ಲಿ ಯಾವುದೇ ಅವ್ಯವಹಾರವೇ ನಡೆದಿಲ್ಲ ಎಂದು ವಿಧಾನ ಮಂಡಲ ಕಾಗದ ಪತ್ರ ಸಮಿತಿ ಅಧ್ಯಕ್ಷ ಸಾ.ರಾ ಮಹೇಶ್ ಸ್ಪಷ್ಟಪಡಿಸಿದ್ದಾರೆ.
ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಇದೇ ವಿಷಯವಾಗಿ ನಡೆದ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ಖಾಸಗಿ ಬ್ಯಾಂಕಿನಲ್ಲಿ ಹಣ ಇಟ್ಟಿರುವುದು ತಪ್ಪು ಎನ್ನಲಾಗಿತ್ತು, ಆದರೆ ನಿನ್ನೆ ನಾನು ಒಂದು ಸುತ್ತೋಲೆಯನ್ನು ನೋಡಿದ್ದೇನೆ. ರಿಸರ್ವ್ ಬ್ಯಾಂಕ್ ಅಡಿಯಲ್ಲಿ ಬರುವ ಯಾವುದೇ ಬ್ಯಾಂಕಿನಲ್ಲಿ ಹಣವನ್ನು ಇರಿಸಬಹುದು ಎಂದಿದೆ. ಖಾತೆ ತೆರೆಯುವಾಗ ಜಿಲ್ಲಾಧಿಕಾರಿಯಿಂದ ಒಪ್ಪಿಗೆ ಪಡೆದಿಲ್ಲ ಎನ್ನುವುದನ್ನು ಬಿಟ್ಟರೆ ಹಣ ದುರುಪಯೋಗವಾಗಿಲ್ಲ ಎಂದು ಸಮಿತಿ ಅಧ್ಯಕ್ಷ ಸಾ.ರಾ ಮಹೇಶ್ ಹೇಳಿದ್ದಾರೆ.
2018ರಲ್ಲಿ ಪ್ರಕೃತಿ ವಿಕೋಪವಾದಾಗ ಇದೇ ಎಂಜಿನಿಯರ್ ಸಾಕಷ್ಟು ಕೆಲಸ ಮಾಡಿದರು. ಅವರನ್ನು ಅಮಾನತುಗೊಳಿಸಿರುವುದಕ್ಕೆ ನ್ಯಾಯಾಲಯ ಸೋಮವಾರ ತಡೆ ನೀಡಿದೆ. ಮೈತ್ರಿ ಸರ್ಕಾರವಿದ್ದಾಗ ಪ್ರಕೃತಿಕ ವಿಕೋಪದ ಸಂತ್ರಸ್ತರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಡುವ ಜೊತೆಗೆ ಉತ್ತಮ ಮನೆಗಳನ್ನು ಕಟ್ಟಿಕೊಡಲಾಗಿದೆ. ಈಗಿರುವ ಸರ್ಕಾರ ಕೂಡ ಅಂತಹದ್ದೇ ಮನೆಯನ್ನು ಕಟ್ಟಿಕೊಡಲಿ ಎಂದು ಸಮಿತಿ ಒತ್ತಾಯಿಸುತ್ತದೆ ಎಂದರು.
ಏನಿದು ವಿವಾದ?
ಕಳೆದ ವರ್ಷ ಕೊಡಗಿನಲ್ಲಿ ಪ್ರವಾಹ ಸಮಯದಲ್ಲಿ ಪ್ರಕೃತಿ ವಿಕೋಪದಡಿ ಸರ್ಕಾರದಿಂದ ನೀಡಿದ್ದ 21 ಕೋಟಿ ರೂ. ಹಣವನ್ನು ಎಂಜಿನಿಯರ್ ಶ್ರೀಕಂಠಯ್ಯ ಖಾಸಗಿ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಖಾಸಗಿ ಬ್ಯಾಂಕ್‍ನಲ್ಲಿ ದುಡ್ಡು ಜಮೆ ಮಾಡಿದ್ದು ತಪ್ಪು, ಅವರು ನಿಯಮಗಳನ್ನು ಮೀರಿದ್ದಾರೆ ಎಂದು ಸಚಿವ ವಿ ಸೋಮಣ್ಣ ಅಧಿಕಾರಿಯನ್ನು ಅಮಾನತು ಮಾಡುವಂತೆ ಸೂಚಿಸಿದ್ದರು.