ಮಡಿಕೇರಿ: ಕೊಡಗಿನಲ್ಲಾದ ಮಹಾ ಪ್ರಳಯಕ್ಕೆ ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪವೇ ಪ್ರಮುಖ ಕಾರಣ ಅಂತ ತಿಳಿದು ಬಂದಿದೆ. ಜಿಲ್ಲಾಡಳಿತದ ಮನವಿ ಮೇರೆಗೆ 1 ತಿಂಗಳ ಕಾಲ ಅಧ್ಯಯನ ನಡೆಸಿದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ವಿಜ್ಞಾನಿಗಳು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
ಅನೇಕ ದಶಕಗಳಿಂದಲೂ ಎಷ್ಟೋ ಭೀಕರ ಮಳೆಯನ್ನ ನೋಡಿದ ಕೊಡಗಿನ ಜನರು ಈ ಬಾರಿ ಸುರಿದ ಮಹಾಮಳೆಗೆ ಕಂಗಲಾಗಿದ್ದರು. ಸದ್ಯ ಈ ದುರಂತಕ್ಕೆ ಕಾರಣವನ್ನ ಕಂಡು ಹಿಡಿಯುವಂತೆ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಗೆ ಕೊಡಗು ಜಿಲ್ಲಾಡಳಿತ ಹಾಗೂ ಸರ್ಕಾರ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಅಧ್ಯಯನ ನಡೆಸಿದ ಇಲಾಖೆಯ ವಿಜ್ಞಾನಿಗಳು ಪ್ರಾಥಮಿಕ ವರದಿಯೊಂದನ್ನ ಸಲ್ಲಿಸಿದ್ದಾರೆ. ಮುಖ್ಯವಾಗಿ ವರದಿಯಲ್ಲಿ ಪ್ರಕೃತಿ ಮೇಲೆ ಮಾನವನ ಹಸ್ತಕ್ಷೇಪವೇ ಇಡೀ ದುರಂತಕ್ಕೆ ಮೂಲ ಕಾರಣ ಅಂತಾ ಹೇಳಲಾಗಿದೆ. ಮಾನವ ಹಸ್ತಕ್ಷೇಪ, ಬೆಟ್ಟ ಗುಡ್ಡಗಳನ್ನ ಅವೈಜ್ಞಾನಿಕವಾಗಿ ವಿರೂಪಮಾಡಿ ಮನೆ ರೆಸಾರ್ಟ್ ನಿರ್ಮಾಣ, ಅವೈಜ್ಞಾನಿಕವಾಗಿ ಗುಡ್ಡ ಪ್ರದೇಶಗಳ ಸಮತಟ್ಟು ಮಾಡಿರೋದು, ತೋಟಕ್ಕಾಗಿ ಬೆಟ್ಟದ ಮೇಲೆ ಕೆರೆ ನಿರ್ಮಾಣ ಇತ್ಯಾದಿ ಕಾರಣಗಳನ್ನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜುಲೈನಲ್ಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಲಘು ಭೂಕಂಪ ಸಂಭವಿಸಿತ್ತು. ಆ ಬಳಿಕ ಹೆಚ್ಚು ಮಳೆ ಬಂದಿತ್ತು. ದುರಂತಕ್ಕೆ ಇದೇ ಮುಖ್ಯ ಕಾರಣ ಅಂತಾ ಹೇಳಲಾಗಿತ್ತು. ಇದೀಗ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ, ದುರಂತಕ್ಕೆ ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪ ಮುಖ್ಯ ಕಾರಣ ಅಂತಾ ಸಲ್ಲಿಸಿರೋದು ಪರಿಸರವಾದಿಗಳ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ.
ಮಾನವ ಪ್ರಕೃತಿ ಮೇಲೆ ಹಸ್ತಕ್ಷೇಪ ನಡೆಸಿದ್ದಾರೆ ಅಂದರೆ ಅದು ಕೇವಲ ಜನಸಾಮಾನ್ಯರ ತಪ್ಪಲ್ಲ. ಕಿಡಿ ಇಲ್ಲದೇ ಹೊಗೆಯಾಡಲ್ಲ ಅನ್ನೋ ಹಾಗೆ ಆಯಾಕಟ್ಟಿನ ಜಾಗದಲ್ಲಿ ಕುಳಿತಿರೋ ಅಧಿಕಾರಿಗಳು ಕೂಡ ಹಣದ ಆಸೆಗೆ ಪ್ರಕೃತಿ ಮೇಲೆ ಅನಾಚಾರ ಮಾಡಲು ಅನುವು ಮಾಡಿಕೊಟ್ಟಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಕೊಡಗು ಜಿಲ್ಲೆ ಹಿಂದೆಂದೂ ಕಾಣದ ಮಹಾ ದುರಂತಕ್ಕೆ ಸಾಕ್ಷಿಯಾಗಿತ್ತು. ಇದಕ್ಕೆ ಸದ್ಯ ಮಾನವನ ಹಸ್ತಕ್ಷೇಪ ಕಾರಣ ಅನ್ನೋ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ವರದಿ, ಒಂದು ವರ್ಗದ ಅಸಮಾಧಾನಕ್ಕೂ ಕೂಡ ಕಾರಣವಾಗಿರೋದಂತೂ ಸತ್ಯ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv