Connect with us

Districts

ನಮಗೆ ನಷ್ಟವಾದರೂ, ಲಾಭವಾದರೂ ತಮಿಳುನಾಡಿಗೆ ನೀರು ಬೇಕು – ಇದು ಯಾವ ನ್ಯಾಯ: ಸಿಎಂಗೆ ಭೈರಪ್ಪ ಪತ್ರ

Published

on

ಮೈಸೂರು: ಕೊಡಗು ಜಲಪ್ರಳಯದ ಕುರಿತು ತಮಿಳುನಾಡು ಸರ್ಕಾರ ಮೌನ ಧೋರಣೆ ತೋರಿಸಿದ್ದಕ್ಕೆ ಕಾದಂಬರಿಕಾರ ಹಾಗೂ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಕಿಡಿಕಾರಿದ್ದಾರೆ.

ಈ ವಿಚಾರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಅವರು ಕಾವೇರಿ ನೀರಿಗಾಗಿ ಪ್ರತಿ ವರ್ಷವೂ ಒಂದಿಲ್ಲೊಂದು ರೀತಿಯಲ್ಲಿ ತಮಿಳುನಾಡು ತಗಾದೆ ತೆಗೆಯುತ್ತಲೇ ಇರುತ್ತದೆ. ಆದರೆ ಈಗ ಕೊಡಗಿನಲ್ಲಿ ಆಗಿರುವ ನಷ್ಟಕ್ಕೆ ಮಾತ್ರ ಪ್ರತಿಕ್ರಿಯೇ ನೀಡದೇ ಮೌನವಾಗಿ ಕುಳಿತಿದೆ. ನಮಗೆ ನಷ್ಟವಾದರೂ, ಲಾಭವಾದರೂ ಅವರಿಗೆ ನೀರು ಬೇಕು. ಇದು ಎಂತಹ ನ್ಯಾಯ ಎನ್ನುವ ಎಂದು ಪ್ರಶ್ನಿಸಿ ಚಾಟಿ ಬೀಸಿದ್ದಾರೆ.

ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವ ಕರ್ತವ್ಯ ಕರ್ನಾಟಕದ್ದು. ಅದರ ಫಲ ಉಣ್ಣುವ ಹಕ್ಕು ಮಾತ್ರ ತಮಿಳುನಾಡಿನದ್ದು. ಇದೊಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ ಎಂದು ತಮ್ಮ ಸಲಹೆ ಮತ್ತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಮೂಲಕ ಹೊಸ ತಂತ್ರ ಬಳಸಿ ಕಾವೇರಿ ನೀರಿಗಾಗಿ ತಮಿಳುನಾಡಿನ ತಗಾದೆಗೆ ಹೇಗೆ ಪ್ರತಿತಂತ್ರ ರೂಪಿಸಬಹುದು ಎಂದು ಎಸ್.ಎಲ್.ಭೈರಪ್ಪ ಅವರು, ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿಸಿ ಹೇಳಿದ್ದಾರೆ.

ಪತ್ರದಲ್ಲಿ ಏನಿದೆ?:
ಒಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ. ಹೆಚ್ಚು ಮಳೆ ಮತ್ತು ಬಿರುಗಾಳಿಯಿಂದಾಗಿ ಕೊಡಗಿನಲ್ಲಿ ಭಾರೀ ಹಾನಿಯಾಗಿದೆ. ಇದಕ್ಕೆ ಕರ್ನಾಟಕ ಸರ್ಕಾರ ಮಾಡಬೇಕಾಗಿರುವ ಸಾವಿರಾರು ಕೋಟಿ ರೂ. ಖರ್ಚು ಹಾಗೂ ಸಾರ್ವಜನಿಕರು ಕೊಡುತ್ತಿರುವ ದೇಣಿಗೆಗಳು ಸರ್ವವಿಧಿತ. ಹೆಚ್ಚು ಮಳೆಯಾಗಲಿ, ಸಾಧಾರಣ ಮಳೆಯಾದರೂ ತಮಿನಾಡು ಸರ್ಕಾರ ಕಾದು ಕುಳಿತು, ತಗಾದೆ ತೆಗೆಯುವ ಮೂಲಕ ನೀರನ್ನು ಕಬಳಿಸುತ್ತದೆ. ಆಗದೇ ಇದ್ದಾಗ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯವನ್ನು ಒತ್ತಾಯಿಸುತ್ತದೆ.

ಕೊಡಗಿನ ನೀರು ಬೇಕು, ಆದರೆ ಅದರ ಹಾನಿಯನ್ನು ತುಂಬಲು ತನ್ನ ಯಾವ ಕರ್ತವ್ಯವೂ ಇಲ್ಲವೆಂಬಂತೆ ತೆಪ್ಪಗಿದೆ. ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವ ಕರ್ತವ್ಯ ಕರ್ನಾಟಕದ್ದು. ಅದರ ಫಲ ಉಣ್ಣುವ ಹಕ್ಕು ಮಾತ್ರ ತಮಿಳುನಾಡಿನದ್ದು. ಈ ಅಂಶಗಳನ್ನು ಒಳಗೊಂಡು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕಾಗಲಿ, ಸಂಬಂಧಿಸಿದ ಟ್ರಿಬ್ಯೂನಲ್ ಅಥವಾ ನ್ಯಾಯಾಲಯಕ್ಕಾಗಲಿ ಹಕ್ಕೊತ್ತಾಯ ಮಾಡುವುದು ಅತ್ಯಗತ್ಯವೆಂದು ನನ್ನ ಭಾವನೆ.

ಮೇಲಿನವರು ನಮ್ಮ ಹಕ್ಕೊತ್ತಾಯವನ್ನು ಈಗ ಮನ್ನಿಸದೇ ಇದ್ದರೂ ನಮ್ಮ ಪಾಲಿನ ನೀರಿನ ಹಕ್ಕೊತ್ತಾಯ ಮಾಡುವಾಗ ಈ ಅಂಶವನ್ನು ಸೇರಿಸಲು ಇದು ಆಧಾರವಾಗುತ್ತದೆ. ಈ ಬಗೆಗೆ ತಾವು ತಕ್ಷಣ ಕಾರ್ಯೋನ್ಮುಖರಾಗುವಿರೆಂಬ ಭರವಸೆಯಿಂದ ಈ ಪತ್ರ ಬರೆದಿದ್ದೇನೆ ಎಂದು ಎಸ್.ಎಲ್.ಭೈರಪ್ಪ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *