ಕೊಡಗು: ಜಿಲ್ಲೆಯ ನದಿ ಸಮೀಪದ ಗ್ರಾಮದಲ್ಲಿ ಭಾರೀ ಮಳೆಯಿಂದ ಪ್ರವಾಹ ಹೆಚ್ಚಾಗಿದ್ದು ಜನ ಪರದಾಡುತ್ತಿದ್ದಾರೆ. ಹೀಗಾಗಿ ಪ್ರವಾಹದ ಬಿಸಿ ಮದುವೆಗಳಿಗೂ ತಟ್ಟಿದ್ದು, ಮಡಿಕೇರಿಯ ತಾಲೂಕಿನ ಒಂದೇ ಗ್ರಾಮದ ನಾಲ್ಕು ಮದುವೆಗಳು ರದ್ದಾಗಿವೆ.
ಕಟ್ಟೆಮಾಡು ಗ್ರಾಮದ ಒಂದೇ ಊರಿನಲ್ಲಿ ನಿಶ್ಚಯವಾಗಿದ್ದ ನಾಲ್ಕು ಮದುವೆಗಳು ರದ್ದಾಗಿವೆ. ಕಾವೇರಿ ಪ್ರವಾಹದಿಂದ ಕಟ್ಟೆಮಾಡುವಿನಲ್ಲಿ 34 ಮನೆಗಳು ನೆಲಸಮವಾಗಿದ್ದು, ಮನೆಗಳ ಜೊತೆಗೆ ಮದುವೆಯ ಚಿನ್ನಾಭರಣ ಮತ್ತು ಹಣ ಸಹ ಕಳೆದು ಹೋಗಿದೆ. ಹೀಗಾಗಿ ಕುಟುಂಬಗಳು ಕಂಗಾಲಾಗಿದ್ದು, ಪ್ರವಾಹದಿಂದಾಗಿ ಬೇಸತ್ತು ಹೋಗಿದ್ದಾರೆ. ಆಭರಣ ಹಾಗೂ ಹಣ ಮನೆಯ ಅವಶೇಷದಡಿಯೇ ಸಿಲುಕಿರುವುದರಿಂದ ಮದುವೆಯನ್ನು ಮುಂದೂಡಲಾಗಿದೆ.
ಕಟ್ಟೆಮಾಡಿನ ರೇವತಿ, ರೇಷ್ಮಾ, ಶಿಲ್ಪಾ ಮತ್ತು ಲತೇಶ್ ಎಂಬುವರ ಮದುವೆಗಳು ರದಾಗಿದ್ದು, ಸೆಪ್ಟೆಂಬರ್ 3 ರಂದು ಶಿಲ್ಪಾ ಅವರ ಮದುವೆಯನ್ನು ನಿಶ್ಚಯಿಸಲಾಗಿತ್ತು. ಡಿಸೆಂಬರ್‍ನಲ್ಲಿ ರೇವತಿ, ರೇಷ್ಮಾ ಮತ್ತು ಲತೇಶ್ ಮದುವೆಯವೆಯನ್ನು ನಡೆಸುವುದಾಗಿ ತೀರ್ಮಾನಿಸಲಾಗಿತ್ತು. ಪ್ರವಾಹದ ಪರಿಸ್ಥಿತಿಯಿಂದಾಗಿ ಈ ನಾಲ್ಕು ಮದುವೆಗಳನ್ನು ರದ್ದುಪಡಿಸಲಾಗಿದೆ.
ಮನೆಗಳು ಕುಸಿದು ಬಿದ್ದಿರುವುದರಿಂದ ಚಿನ್ನಾಭರಣ ಹಾಗೂ ಹಣ ಸಹ ಮನೆಯ ಅವಶೇಷಗಳಡಿಯೇ ಸಿಲುಕಿಕೊಂಡಿದ್ದು, ಮನೆ ಚಿನ್ನಾಭರಣ ಹಾಗೂ ಹಣ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿರುವ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಕೂಲಿ ಮಾಡಿ ಸೂರು ಕಟ್ಟಿಕೊಂಡಿದ್ದೆವು, ಅದೂ ನೆಲಸಮವಾಗಿದೆ. ಕೂಡಿಟ್ಟ ಬಿಡಿಗಾಸು ಸಹ ಕಳೆದು ಹೋಗಿದೆ. ಇದೀಗ ಮತ್ತೆ ಮನೆ ಕಟ್ಟಿ, ಹಣ ಹೊಂದಿಸಿ ಮದುವೆ ಮಾಡುವುದು ಹೇಗೆ ಎಂದು ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಮಲೆನಾಡು, ಕರಾವಳಿ ಭಾಗದ 6 ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದೆ.