ಸಂತ್ರಸ್ತರಿಗೆ ತಾತ್ಕಾಲಿಕ 3,500 ರೂ. ಪರಿಹಾರ: 2 ಸಾವಿರ ಅಲ್ಯುಮಿನಿಯಮ್ ಶೆಡ್ ನಿರ್ಮಾಣ

Public TV
2 Min Read
KUMARASWAMY 1

ಬೆಂಗಳೂರು: ಕೊಡಗು ಪ್ರವಾಹ ಪರಿಸ್ಥಿತಿ ಕುರಿತು ಕೈಗೊಂಡಿರುವ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ ಎಲ್ಲಾ ಸಂತ್ರಸ್ತರಿಗೂ ಹೊಸ ಜೀವನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದ್ದಾರೆ.

ನೆರೆ ಪರಿಹಾರ ಕುರಿತು ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಸಿಎಂ, ಅತಿಯಾದ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಅನಾಹುತವಾಗಿದ್ದು, ಸರ್ಕಾರ ತಕ್ಷಣ ಸ್ಪಂದನೆ ಮಾಡಿದೆ. ಇದರಲ್ಲಿ ಯಾವುದೇ ಲೋಪ ಆಗಿಲ್ಲ. ಕಳೆದ ತಿಂಗಳು ಕೊಡಗಿಗೆ ಭೇಟಿ ನೀಡಿದ್ದ ವೇಳೆಯೂ ಮೂಲಭೂತ ಸೌಲಭ್ಯ ಕಲ್ಪಿಸಲು 100 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿತ್ತು. ಆಗಸ್ಟ್ 13 ಹಾಗೂ 14ರ ಬಳಿಕ ಕೊಡಗು ಜಿಲ್ಲೆಯಲ್ಲಿ ಅನೇಕ ಕಡೆ ಗುಡ್ಡ ಕುಸಿತ ಪ್ರಾರಂಭವಾಗಿತ್ತು. ಸತಕ್ಷಣದಿಂದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠ ಅಧಿಕಾರಿಗಳು ಶ್ರಮಪಟ್ಟು ಕಾರ್ಯನಿರ್ವಹಿಸಿದ್ದಾರೆ ಎಂದರು.

ಸದ್ಯ ಕಾರ್ಯಾಚರಣೆಯಲ್ಲಿ 1,725 ಕ್ಕೂ ಹೆಚ್ಚಿನ ರಕ್ಷಣಾ ಸಿಬ್ಬಂದಿ ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಭೂಸೇನೆ, ವಾಯುಪಡೆ, ರಾಷ್ಟ್ರೀಯ ವಿಪತ್ತು ಪಡೆ, ಎನ್‍ಸಿಸಿ ಸೇರಿದಂತೆ ವಿಶೇಷ ಪಡೆಗಳು ಕೆಲಸ ಮಾಡುತ್ತಿವೆ. ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ ವಿಶೇಷವಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೇ ಪುನರ್ವಸತಿ ಕೇಂದ್ರ ನಿರ್ವಹಣೆಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

ಇದುವರೆಗೂ ರಾಜ್ಯದಲ್ಲಿ ಮಳೆಯಿಂದ 152 ಜನ ಮೃತರಾಗಿದ್ದಾರೆ. ಇದರಲ್ಲಿ ಕೊಡಗಿನಲ್ಲಿ ಕೇವಲ 7 ಜನರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ವರದಿ ಬಂದಿದೆ. ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಉಸ್ತುವರಿ ಸಚಿವರು, ಡಿಸಿಎಂ ಸೇರಿದಂತೆ ಬಿಬಿಎಂಪಿ ಪೌರ ಕಾರ್ಮಿಕರು ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ಇಂತಹ ಭೂ ಕುಸಿತ ಪ್ರಕರಣ ಹೆಚ್ಚಾಗಿದ್ದು, ಅಲ್ಲಿನ ತಜ್ಞರ ಜೊತೆ ಮಾತನಾಡಿ ಇಬ್ಬರು ತಜ್ಞರನ್ನು ಹಿಮಾಚಲ ಪ್ರದೇಶದಿಂದ ಕರೆಯಿಸಿಕೊಳ್ಳಲಾಗಿದೆ. ಅಲ್ಲದೇ ಹೈದ್ರಾಬಾದಿನ ಭೂ ವಿಜ್ಞಾನಿಗಳನ್ನು ಕರೆಯಲಾಗಿದೆ. ಭೂಕಂಪದಂತಹ ಯಾವುದೇ ಸುದ್ದಿಗೆ ಜನರು ಅಂತಕ ಪಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಜೊತೆಗಿದೆ ಎಂದರು.

ಇದುವರೆಗೂ ಕೊಡಗಿನಲ್ಲಿ 845 ಮನೆ ನಾಶವಾಗಿದ್ದು, 773 ಮನೆಗಳು ಭಾಗಶಃ ಹಾನಿಯಾಗಿದೆ. 123 ಕಿಲೋಮೀಟರ್ ರಸ್ತೆ ಹಾನಿಯಾಗಿದೆ. 58 ಸೇತುವೆ, 3,800 ವಿದ್ಯುತ್ ಕಂಬ ಹಾನಿಯಾಗಿದೆ. ಅದಷ್ಟು ಬೇಗ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಕೊಡಗಿನಲ್ಲಿ 41 ಪರಿಹಾರ ಕೇಂದ್ರ, ದಕ್ಷಿಣ ಕನ್ನಡದಲ್ಲಿ 9 ಕೇಂದ್ರ ಸ್ಥಾಪನೆ ಮಾಡಿ 6,620 ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಆಶಯ ನೀಡಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಶೌಚಾಲಯ ಕೊರತೆ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ ಎಂದರು.

ನಿರಾಶ್ರಿತರಿಗೆ ನರೇಗಾ ಯೋಜನೆ ಅಡಿ ಕೆಲಸ ನೀಡಲು ಸೂಚನೆ ನೀಡಲಾಗಿದ್ದು, 2 ಸಾವಿರ ಅಲ್ಯುಮಿನಿಯಂ ಶೆಡ್ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ. ತಾತ್ಕಾಲಿಕ ಪರಿಹಾರವಾಗಿ ನೆರೆ ಸಂತ್ರಸ್ತರಿಗೆ 3,800 ಪರಿಹಾರ ಹಣ ಹಾಗೂ ಆಹಾರ ಪದಾರ್ಥ ನೀಡಲಾಗುತ್ತದೆ. ನಾಳೆಯಿಂದ ಎಲ್ಲಾ ಕೆಲಸ ಆರಂಭವಾಗುತ್ತದೆ. ಶಾಶ್ವತ ಪರಿಹಾರ ನೀಡಲು ಎಷ್ಟೇ ಹಣ ವೆಚ್ಚವಾದರು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *