ಮಡಿಕೇರಿ: ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿತ್ತು. ಒಂದೆಡೆ ಕಾವೇರಿ ನದಿ ಉಕ್ಕಿ ಹರಿದರೆ ಮತ್ತೊಂದೆಡೆ ಹಾರಂಗಿ ಜಲಾಶಯದಿಂದ ಒಂದೇ ಬಾರಿ 1 ಲಕ್ಷ ಕ್ಯೂಸೆಕ್‍ಗೂ ಹೆಚ್ಚಿನ ಪ್ರಮಾಣದ ನೀರನ್ನು ಹೊರಹರಿಸಲಾಗಿತ್ತು. ಎರಡು ನೀರು ಒಂದೆಡೆ ಸೇರಿದ್ದರಿಂದ ಪ್ರವಾಹದ ತೀವ್ರತೆ ಮತ್ತಷ್ಟು ಹೆಚ್ಚಾಗಿ ಭಾರೀ ಪ್ರಮಾಣದಲ್ಲಿ ಪ್ರವಾಹ ಉಂಟಾಗಿತ್ತು. ಇದಕ್ಕೆಲ್ಲಾ ಕಾರಣ ಹಾರಂಗಿ ಜಲಾಶಯ ಮತ್ತು ಕಾವೇರಿ ನದಿಯಲ್ಲಿ ಇನ್ನಿಲ್ಲದಂತೆ ತುಂಬಿರುವ ಹೂಳು.
2018 ರಲ್ಲಿ ಹಾರಂಗಿ ನದಿಪಾತ್ರವಾದ ಮುಕ್ಕೋಡ್ಲು, ಮೇಘತಾಳು, ಎಮ್ಮೆತಾಳು ಮತ್ತು ಹಟ್ಟಿಹೊಳೆ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಬಾರೀ ಕುಸಿತವಾಗಿತ್ತು. ಈ ವೇಳೆ ಸಾವಿರಾರು ಕ್ಯುಬಿಕ್ ಮೀಟರನಷ್ಟು ಮಣ್ಣು ಪ್ರವಾಹದ ನೀರಿನಲ್ಲಿ ಕೊಚ್ಚಿ ಬಂದು ಹಾರಂಗಿಯಲ್ಲಿ ಕನಿಷ್ಠ 7 ರಿಂದ 8 ಅಡಿಯಷ್ಟು ಹೂಳು ತುಂಬಿಕೊಂಡಿತ್ತು. 8.5 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸಂಗ್ರಹಣ ಸಾಮರ್ಥ್ಯ ಕಡಿಮೆಯಾಗಿ ಹರಿದು ಬಂದ 76.93 ಟಿಎಂಸಿ ನೀರಿನಲ್ಲಿ 60 ಟಿಎಂಸಿ ನೀರನ್ನು ನದಿಗೆ ಹರಿಸಲಾಗಿತ್ತು. ಇದರಿಂದ ಹಾರಂಗಿ ಕೆಳಭಾಗದಲ್ಲಿರುವ ಕೂಡಿಗೆ, ಹೆಬ್ಬಾಲೆ, ಕುಶಾಲನಗರ, ಮುಳ್ಳುಸೋಗೆ ಗ್ರಾಮಗಳು ಪ್ರವಾಹದಲ್ಲಿ ಮುಳುಗಡೆಯಾಗಿದ್ದವು.
ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯಲು 2019ರ ಸಮ್ಮಿಶ್ರ ಸರ್ಕಾರದಲ್ಲಿ 100 ಕೋಟಿ ರೂ. ಘೋಷಣೆಯಾಗಿದ್ದರೂ ಹೂಳು ತೆಗೆಯಲು ಇದುವರೆಗೆ ಯಾವುದೇ ಯೋಜನೆ ರೂಪುಗೊಂಡಿಲ್ಲ. ಇದು ಜಿಲ್ಲೆಯ ಜನರು ಸಿಟ್ಟಿಗೇಳುವಂತೆ ಮಾಡಿದೆ. ಇನ್ನೂ ಹಾರಂಗಿ ಜಲಾಶಯದಲ್ಲಿ ಅಷ್ಟೇ ಅಲ್ಲ, ಕಾವೇರಿ ನದಿಯಲ್ಲೂ ಅಪಾರ ಪ್ರಮಾಣದ ಮರಳು ದಿನ್ನೆಗಳು ನಿರ್ಮಾಣವಾಗಿವೆ. ಅಲ್ಲದೆ ಕಾವೇರಿ ನದಿ ಪಾತ್ರದ ಬಹುತೇಕ ಜಾಗಗಳು ಸಂಪೂರ್ಣ ಒತ್ತುವರಿಯಾಗಿವೆ. ಹೀಗಾಗಿ ಬ್ರಹ್ಮಗಿರಿ ಬೆಟ್ಟ, ತಲಕಾವೇರಿ, ಬಾಗಮಂಡಲ ಸೇರಿದಂತೆ ನದಿ ಪಾತ್ರದಲ್ಲಿ ಒಂದು ದಿನ ಎಡಬಿಡದೆ ಮಳೆ ಸುರಿದರೂ ಸಾಕು ಪ್ರವಾಹದ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ನದಿಯಲ್ಲಿ ತುಂಬಿರುವ ಮರಳು ಮತ್ತು ಹಾರಂಗಿ ನದಿಯಲ್ಲಿ ತುಂಬಿರುವ ಹೂಳು ತೆಗೆಯದಿದ್ದರೆ ಈ ಬಾರಿಯೂ ಪ್ರವಾಹ ತಪ್ಪಿದ್ದಲ್ಲ.
ಹೂಳು ತೆಗೆಯಲು ಬಜೆಟ್‍ನಲ್ಲೇ ಅನುದಾನ ಘೋಷಣೆ ಮಾಡಿ ಒಂದು ವರ್ಷವೇ ಕಳೆದಿದ್ದರೂ ಇದುವರೆಗೆ ಯೋಜನೆ ರೂಪಿಸಿಲ್ಲ. 2019ರ ಮಾರ್ಚ್ ತಿಂಗಳಲ್ಲಿ ಹೂಳು ತುಂಬಿರುವ ಪ್ರದೇಶದ ಸರ್ವೇ ಮಾಡಿದ್ದು ಬಿಟ್ಟರೆ, ಬೇರೆನೂ ಆಗಿಲ್ಲ. ಇನ್ನು ಮೂರು ತಿಂಗಳು ಕಳೆದರೆ ಕೊಡಗಿನಲ್ಲಿ ಮಳೆಗಾಲ ಆರಂಭವಾಗಿ ಬಿಡುತ್ತದೆ. ಮಳೆ ಆರಂಭವಾಯಿತೆಂದರೇ ಹೂಳು ತೆಗೆಯಲು ಸಾಧ್ಯವೇ ಇಲ್ಲ. ಶಾಸಕರು ಮಾತ್ರ ಕೂಡಲೇ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಿದ್ದಾರೆ.