ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹತ್ಯೆ – ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ ಜನಾಂದೋಲನ

Public TV
3 Min Read
kalagi protest 1

ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿ ಹತ್ಯೆ ಮಾಡಿದ ಆರೋಪಿಗಳ ಗಡಿಪಾರು ಮಾಡುವಂತೆ ಒತ್ತಾಯಿಸಿ ಬೃಹತ್ ಜನಾಂದೋಲನ ಮಡಿಕೇರಿ ತಾಲೂಕಿನ ಸಂಪಾಜೆಯಲ್ಲಿ ನಡೆಯಿತು.

ಸಂಪಾಜೆ ಗೇಟ್ ಬಳಿಯಿಂದ ಕೊಯಿನಾಡುವರೆಗೆ ಬಾಲಚಂದ್ರ ಕಳಗಿಯ ಫೋಟೋ ಹಿಡಿದು ಮೆರವಣಿಗೆ ಸಾಗಿದ ಸಾವಿರಾರು ಜನ ಆರೋಪಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜನಜಾಗೃತಿ ಸಭೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ವಿಶ್ವ ಹಿಂದು ಪರಿಷತ್‍ನ ವಿಭಾಗಿಯ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಪಾಲ್ಗೊಂಡಿದ್ದರು.

kalagi protest 2

ಮಾರ್ಚ್ 19 ಸಂಜೆ ಮೇಕೇರಿ ಬಳಿ ಕಳಗಿಯ ಕಾರಿಗೆ ಲಾರಿ ಡಿಕ್ಕಿ ಹೊಡೆದು ಹತ್ಯೆ ಮಾಡಲಾಗಿತ್ತು. ಬಳಿಕ ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಜಯ, ಸಂಪತ್, ಹರಿಪ್ರಸಾದ್ ಎಂಬವರನ್ನು ಬಂಧಿಸಿದ್ದರು. ಇದೀಗ ಜಾಮೀನಿನಲ್ಲಿ ಹೊರಬಂದಿದ್ದು, ಅವರಿಗೆ ಗ್ರಾಮಕ್ಕೆ ಬರಲು ಅವಕಾಶ ನೀಡಬಾರದೆಂದು ಆಗ್ರಹಿಸಿ ಇಂದು ಕಾರ್ಯಕ್ರಮ ನಡೆಯಿತು. ಮುಖ್ಯ ಭಾಷಣ ಮಾಡಿದ ಶರಣ್ ಪಂಪ್‍ವೆಲ್ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.

ಆರಂಭದಲ್ಲಿ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಈ ಪ್ರಕರಣವನ್ನು ಬಿಂಬಿಸಲಾಗಿತ್ತು. ಆದರೆ ಬಾಲಚಂದ್ರ ಅವರ ಚಿಕ್ಕಪ್ಪ ರಾಜಾರಾಮ ಕಳಗಿ ಸಲ್ಲಿಸಿದ ಸಂಶಯಾಸ್ಪದ ಬಗ್ಗೆ ದೂರು ಪರಿಗಣಿಸಿ ತನಿಖೆ ನಡೆಸಿದ ಮಡಿಕೇರಿ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು.

ಹತ್ಯೆ ಮಾಡಿದ್ದು ಯಾಕೆ?
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅವರಲ್ಲಿ ಸಂಪತ್ ವೈನ್ ಶಾಪ್ ತೆರೆಯಲು ಅನುಮತಿ ಕೇಳಿದ್ದ. ಕಳಗಿ ಅವರು ವೈನ್ ಶಾಪ್ ತೆರೆಯಲು ಅನುಮತಿ ನೀಡಿರಲಿಲ್ಲ. ರಿಕ್ರಿಯೇಶನ್ ಕ್ಲಬ್ ಮಾಡುವುದಕ್ಕೂ ಕಳಗಿ ವಿರೋಧ ವ್ಯಕ್ತಪಡಿಸಿದ್ದರು. ಅನುಮತಿ ನೀಡದ್ದಕ್ಕೆ ಅಸಮಾಧಾನಗೊಂಡಿದ್ದ ಸಂಪತ್ ಕೊಲೆ ಮಾಡಲು ಪ್ಲಾನ್ ಮಾಡಿದ್ದ.

blachandra kalgai

ಕೊಲೆ ನಡೆಸಲು ಜಯ ಮತ್ತು ಹರಿಪ್ರಸಾದ್‍ಗೆ ಸಂಪತ್ ಸುಪಾರಿ ನೀಡಿದ್ದ. ಹಿಂದೆ ಜಯನ ವಾಹನ ಅಪಘಾತಗೊಂಡಿದ್ದಾಗ ಸಂಪತ್ ಬಿಡಿಸಿಕೊಟ್ಟಿದ್ದ. ಹೀಗಾಗಿ ಜಯ ಮತ್ತು ಸಂಪತ್ ಸ್ನೇಹಿತರಾಗಿದ್ದರು. ಹತ್ಯೆ ಮಾಡಿದ್ರೆ 1.5 ಲಕ್ಷದ ಲೋನ್ ಕ್ಲಿಯರ್ ಮಾಡಿಕೊಡುತ್ತೇನೆ ಎಂದು ಸುಪಾರಿ ನೀಡಿದ್ದ. ಈ ಕೃತ್ಯಕ್ಕೆ ಸ್ನೇಹಿತ ಹರಿಪ್ರಸಾದ್ ಸಹಕರಿಸುವುದಾಗಿ ತಿಳಿಸಿದ್ದ.

ಪ್ಲಾನ್ ಹೀಗಿತ್ತು:
ಕಳಗಿಯನ್ನು ಹತ್ಯೆ ಮಾಡಲು ಮೂವರು ಒಂದು ತಿಂಗಳಿನಿಂದ ಸರಿಯಾದ ಸಮಯವನ್ನು ಕಾಯುತ್ತಿದ್ದರು. ಮಾರ್ಚ್ 19 ರಂದು ಕಳಗಿ ಅವರು ಮಡಿಕೇರಿಗೆ ತೆರಳಿ ಮರಳಿ ಮನೆಗೆ ಬರುತ್ತಿದ್ದಾಗ ಡ್ರೈವರ್ ಆಗಿದ್ದ ಜಯ ತಾಳತ್ತಮನೆ ಸಮೀಪ ಲಾರಿಯನ್ನು ಓಮ್ನಿಗೆ ಗುದ್ದಿಸಿದ್ದ. ಪರಿಣಾಮ ಕಳಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

mdk bjp murder

ಅನುಮಾನ ಬಂದಿದ್ದು ಹೇಗೆ?
ಬಾಲಚಂದ್ರ ಕಳಗಿ ಸಾವಿನ ಬಗ್ಗೆ ಹಲವು ಸಂಶಯಗಳು ಹುಟ್ಟಿಕೊಂಡಿದ್ದು, ಸೂಕ್ತ ತನಿಖೆ ನಡೆಸಿ ಸತ್ಯಾಂಶವನ್ನು ಬಯಲಿಗೆ ಎಳೆಯುವಂತೆ ಮೃತರ ಚಿಕ್ಕಪ್ಪ ಹಾಗೂ ಬಿಜೆಪಿ ಪ್ರಮುಖ ರಾಜಾರಾಮ ಕಳಗಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರ್ಚ್ 23 ರಂದು ದೂರು ದಾಖಲಿಸಿದ್ದರು.

ಸಾವಿನ ಬಗ್ಗೆ ಮೃತರ ಸಂಬಂಧಿಕರು ಹಾಗೂ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜಿಲ್ಲಾ ಬಿಜೆಪಿಯೂ ಕಳಗಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿತ್ತು. ಮೃತರ ಚಿಕ್ಕಪ್ಪ ನೀಡಿರುವ ದೂರಿನ ಬೆನ್ನಲ್ಲೇ ಡಿವೈಎಸ್‍ಪಿ ಕೆ.ಎಸ್.ಸುಂದರರಾಜ್ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಸಿದ್ದಯ್ಯ ಹಾಗೂ ಠಾಣಾಧಿಕಾರಿ ಚೇತನ್ ತನಿಖೆ ಆರಂಭಿಸಿದ್ದರು.

md bjp accident

ಸಿಕ್ಕಿಬಿದ್ದಿದ್ದು ಹೇಗೆ?
ಬಲವಾದ ಶಂಕೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಜಯನನ್ನು ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆ ವೇಳೆ ಜಯ ಸತ್ಯವನ್ನು ಹೇಳಿದ್ದು, ವೈನ್, ಮರಳು ಮಾಫಿಯಾ, ರಿಕ್ರಿಯೇಶನ್ ಕ್ಲಬ್ ಮಾಡಲು ಬಿಡದಕ್ಕೆ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಈತ ತಿಳಿಸಿದ ಮಾಹಿತಿ ಆಧಾರದ ಹಿನ್ನೆಲೆಯಲ್ಲಿ ಉಳಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *