– ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಶಾಲೆ ನಿರ್ಮಾಣ
ಮಡಿಕೇರಿ: ಕೊಡಗು ಜಿಲ್ಲೆಯ ಕೊಯನಾಡು ಸರ್ಕಾರಿ ಶಾಲೆಯ (Koyanadu Govt School) ಬಳಿ ಪದೇ ಪದೇ ಭೂಕುಸಿತವಾಗುತ್ತಿತ್ತು. ಪೋಷಕರು ಮಳೆಗಾಲದಲ್ಲಿ ಜೀವಭಯದಿಂದಲೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಇದೀಗ ಶಾಲೆಯನ್ನೇ ಸ್ಥಳಾಂತರ ಮಾಡಲು ಜಾಗ ಗುರುತಿಸಿ ಭೂಮಿ ಪೂಜೆ ಮಾಡಲಾಗಿದೆ.
ಕೊಯನಾಡು ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲೆ 2022 ಹಾಗೂ 2024ರಲ್ಲಿ ಎರಡು ಭಾರಿ ಗುಡ್ಡದ ಮಣ್ಣು ಕುಸಿದು ಭಾರೀ ಅನಾಹುತ ಸಂಭವಿಸಿತ್ತು. ಭೂಕುಸಿತದಿಂದಾಗಿ ಸಾಕಷ್ಟು ಕೊಠಡಿಗಳಿಗೂ ಹಾನಿಯುಂಟಾಗಿದ್ದು, ಪ್ರತೀ ಮಳೆಗಾಲದಲ್ಲಿ ಮಕ್ಕಳಿಗೆ ಬದಲಿ ವ್ಯವಸ್ಥೆ ಮಾಡಲಾಗುತ್ತಿತ್ತು. ಆದ್ದರಿಂದ ಬೇರೆ ಕಡೆ ಕಟ್ಟಡ ನಿರ್ಮಾಣ ಮಾಡಿ ಶಾಲೆಯನ್ನು ಸ್ಥಳಾಂತರ ಮಾಡುವಂತೆ ಪೋಷಕರು ಶಿಕ್ಷಣ ಇಲಾಖೆ ಹಾಗೂ ಶಾಸಕರನ್ನು ಆಗ್ರಹಿಸಿದ್ದರು. ಅದರ ಪರಿಣಾಮವಾಗಿ ಇದೀಗ ಶಾಲೆಯ ಸಮೀಪದಲ್ಲಿ ಅರಣ್ಯ ಇಲಾಖೆಗೆ ಸೇರಿದೆ ಎನ್ನಲಾದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದ್ದಾರೆ. ಸದ್ಯಕ್ಕೆ 40 ಲಕ್ಷ ರೂ. ಹಣ ನೀಡಿದ್ದು, ಜಾಗ ಹಸ್ತಾಂತರ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಗಾಂಧಿ ಹೆಸರು ತೆಗೆದು ರಾಮ ಅಥವಾ ಅದನ್ನು ತೆಗೆದು ಬೇರೆ ಯಾರದ್ದೋ ಹೆಸರು ಹಾಕೋದು ಸರಿಯಲ್ಲ: ಎಂ.ಬಿ ಪಾಟೀಲ್
ಇನ್ನು ಕೊಯನಾಡು ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿಯಿಂದ ಏಳನೇ ತರಗತಿವರೆಗೆ ಒಟ್ಟು 86 ವಿದ್ಯಾರ್ಥಿಗಳಿದ್ದಾರೆ. ಸದ್ಯಕ್ಕೆ ಭೂಕುಸಿತವಾದ ಕೊಠಡಿಗಳ ಪಕ್ಕದಲ್ಲಿರುವ ಮೂರು ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿದೆ. ಇದೀಗ ಭೂಮಿ ಪೂಜೆಯಾದ ಸ್ಥಳದ ಹಿಂಭಾಗದಲ್ಲಿ ಪಯಸ್ವಿನಿ ನದಿ ಹರಿಯುತ್ತಿದ್ದು, ತಡೆಗೋಡೆ ನಿರ್ಮಾಣವಾಗಬೇಕಿದೆ. ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 275 ಹಾದುಹೋಗಿದೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ಇದು ಉತ್ತಮ ಸ್ಥಳವಾಗಿದ್ದು, ಅಧಿಕಾರಿಗಳು ಕೂಡಲೇ ಪ್ರಕ್ರಿಯೆ ಆರಂಭಿಸಬೇಕೆಂದು ಆಗ್ರಹಿಸಲಾಗುತ್ತಿದೆ. ಇದನ್ನೂ ಓದಿ: ರೈತರ ಅಭಿವೃದ್ಧಿಗೆ ರಾಜ್ಯ, ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಬೇಕು: ಚಲುವರಾಯಸ್ವಾಮಿ
ಒಟ್ಟಿನಲ್ಲಿ ಅರಣ್ಯ ಇಲಾಖೆ ಜಾಗವನ್ನು ಹಸ್ತಾಂತರ ಮಾಡಿ ಕಾಮಗಾರಿ ಆರಂಭವಾದ ಬಳಿಕವಷ್ಟೇ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ. ಅಲ್ಲಿಯವರೆಗೂ ಈಗಿರುವ ಶಾಲೆಯಲ್ಲಿಯೇ ಮಕ್ಕಳು ವಿದ್ಯಾಭ್ಯಾಸ ನಡೆಸಬೇಕಾಗಿದೆ. ಇದನ್ನೂ ಓದಿ: ತಾಯಿ & ನಾಲ್ಕು ಮರಿ ಹುಲಿಗಳ ಸಂಚಾರದ ಬಗ್ಗೆ ಸತತ ನಿಗಾಕ್ಕೆ ಈಶ್ವರ ಖಂಡ್ರೆ ಆದೇಶ

