ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿಗಳ (Military) ಪೈಕಿ ಚೀನಾ (China) 3ನೇ ಸ್ಥಾನವನ್ನು ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಹೊಸಹೊಸ ಅಸ್ತ್ರವನ್ನು ಸೃಷ್ಟಿಸುವ ಮೂಲಕ ಚೀನಾ ತನ್ನ ಸೇನಾಶಕ್ತಿಯನ್ನು ಹೆಚ್ಚಿಸುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿದೆ. ಇದೀಗ ರೋಬೊಟ್ ಡಾಗ್ (Robot Dog) ಎಂಬ ವಿಶೇಷ ಸಾಮರ್ಥ್ಯವುಳ್ಳ ಅಸ್ತ್ರವನ್ನು ಅನಾವರಣಗೊಳಿಸುವ ಮೂಲಕ ಚೀನಾ ಶತ್ರುಗಳಲ್ಲಿ ಭಯಹುಟ್ಟಿಸಿದೆ. ಚೀನಾದ ಮಿಲಿಟರಿಗೆ ಹೊಸದಾಗಿ ಸೇರ್ಪಡೆಯಾಗಿರುವ ರೋಬೊಟ್ ನಾಯಿ ಹೇಗಿದೆ? ಇದರ ಕಾರ್ಯವೈಖರಿ ಹೇಗೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ಏನಿದು ಚೀನಾದ ಹೊಸ ಅಸ್ತ್ರ?
ಚೀನಾ ತನ್ನ ಸೇವಾ ಸಾಮರ್ಥ್ಯದ ಇತ್ತೀಚಿನ ಪ್ರದರ್ಶನದಲ್ಲಿ ಮೆಷಿನ್ ಗನ್‌ಗಳನ್ನು ಹಾರಿಸುವ ಸಾಮರ್ಥ್ಯವುಳ್ಳ ರೋಬೊಟ್ ನಾಯಿಯನ್ನು ಪ್ರದರ್ಶಿಸಿದೆ. ಚೀನಾ-ಕಾಂಬೋಡಿಯಾ ʼಗೋಲ್ಡನ್ ಡ್ರ್ಯಾಗನ್ 2024ʼ ವ್ಯಾಯಾಮದ ಸಮಯದಲ್ಲಿ ಚೀನಾದ ಮಿಲಿಟರಿ ರೈಫಲ್‌ಗಳನ್ನು ಹೊಂದಿದ ರೋಬೋಟ್ ನಾಯಿಗಳನ್ನು ಅನಾವರಣಗೊಳಿಸಿದೆ. ಈ ಪ್ರದರ್ಶನವು ಮಿಲಿಟರಿ ಕಾರ್ಯಾಚರಣೆಗಳಲ್ಲಿ ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯ ಏಕೀಕರಣದಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ.
Advertisement
ಈ ತಿಂಗಳ ಆರಂಭದಲ್ಲಿ ಚೀನಾ ಮತ್ತು ಕಾಂಬೋಡಿಯಾ ನಡೆಸಿದ ಮಿಲಿಟರಿ ತರಬೇತಿ ವ್ಯಾಯಾಮದಲ್ಲಿ ರಿಮೋಟ್ ಕಂಟ್ರೋಲ್ ರೋಬೊಟ್‌ಗಳನ್ನು ಚೀನಾ ಅನಾವರಣಗೊಳಿಸಿದೆ. ಸ್ಟೇಟ್ ಬ್ರಾಡ್‌ಕಾಸ್ಟರ್ ಸಿಸಿಟಿವಿ ಈ ಕುರಿತು ವೀಡಿಯೋವೊಂದನ್ನು ಹಂಚಿಕೊಂಡಿದೆ. ಈ ವೀಡಿಯೋದ ಪ್ರಕಾರ ಬ್ಯಾಟರಿ ಚಾಲಿತ ರೋಬೊಟ್ ಡಾಗ್‌ಗಳು 2ರಿಂದ 4 ಗಂಟೆಗಳವರೆಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
Advertisement
ಹೇಗಿದೆ ಈ ರೋಬೊಟ್ ಡಾಗ್?
15 -50 ಕೆಜಿ ತೂಕ ಇರುವ ಈ ರೋಬೋ ನಾಯಿಗೆ 4ಡಿ ಸೂಪರ್ ವೈಡ್ ಆ್ಯಂಗಲ್ ಸೆನ್ಸಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಜೊತೆಗೆಅದರೊಳಗೆ ಬ್ಯಾಟರಿ ಮತ್ತು ಪವರ್ ಸಿಸ್ಟಮ್ ಕೂಡಾ ಇದೆ. ಈ ರೋಬೋ ನಾಯಿ ಹಿಂದೆ, ಮುಂದೆ, ಅಕ್ಕ, ಪಕ್ಕ ಯಾವುದೇ ಕಡೆ ಬೇಕಾದರೂ ಚಲಿಸಬಲ್ಲದಾಗಿದೆ. ಜೊತೆಗೆ ಸಾಮಾನ್ಯ ನಾಯಿಯಂತೆ ಬಗ್ಗುವ, ಹಾರುವ, ಸಾಗುವ ಹಾದಿಯಲ್ಲಿ ಯಾವುದೇ ಅಡೆತಡೆ ಎದುರಾದರೆ ಸ್ವಯಂ ತನ್ನ ಚಲನವಲನ ನಿರ್ಧರಿಸುವ ಸಾಮರ್ಥ್ಯ ಹೊಂದಿದೆ.
Advertisement
ಒಮ್ಮೆ ಚಾರ್ಜ್ ಮಾಡಿದರೆ 2 ರಿಂದ 4 ಗಂಟೆ ಕಾಲ ಗುಂಡಿನ ದಾಳಿ ನಡೆಸಬಲ್ಲದು. ನಾಯಿಯ ತಲೆಯ ಮೇಲ್ಬಾಗದಲ್ಲಿ ಅತ್ಯಾಧುನಿಕ ಗನ್ ಅಳವಡಿಸಲಾಗಿದ್ದು, ಅದರ ಮೂಲಕ ಗುಂಡು ಹಾರಿಸಬಲ್ಲದಾಗಿದೆ. ಇದು ತಾನು ಇರುವ ಸ್ಥಳದ ಸುತ್ತಲಿನ ಪ್ರತಿ ಬೆಳವಣಿಗೆಯ ಕುರಿತು ತತ್‌ಕ್ಷಣದ ಮಾಹಿತಿಯನ್ನು ನಿರ್ವಾಹಕರಿಗೆ ರವಾನಿಸುತ್ತದೆ. ಅದನ್ನು ಆಧರಿಸಿ ರಿಮೋಟ್ ಮೂಲಕ ರೋಬೋಟ್ ನಿರ್ವಹಿಸುವವರು ನಾಯಿಯನ್ನು ಎಲ್ಲಿಗೆ ಬೇಕಾದರೂ ಕಳುಹಿಸಬಹುದು ಮತ್ತು ಹೇಗೆ ಬೇಕಾದರೂ ದಾಳಿ ಮಾಡಬಹುದು.
Advertisement
ಲಾಭ ಏನು?
ಎದುರಾಳಿಗಳ ದಾಳಿ ತಡೆಯುವ ವೇಳೆ ಅಥವಾ ಅವರ ಮೇಲೆ ದಾಳಿ ನಡೆಸುವ ವೇಳೆ ಯೋಧರು ಗುಂಡಿನ ದಾಳಿಗೆ ತುತ್ತಾಗಿ ಗಾಯಗೊಳ್ಳುವ ಅಥವಾ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಆದರೆ ರೋಬೋ ಬಳಸಿದರೆ ಅಂಥ ಅಪಾಯ ಇರದು. ಜೊತೆಗೆ ಇವುಗಳ ಚಲನೆಯ ವೇಗ ಕೂಡಾ ಯೋಧರಿಗಿಂತ ಹೆಚ್ಚಿರುತ್ತದೆ. ಜೊತೆಗೆ ತನ್ನ ಸುತ್ತಲೂ 360 ಡಿಗ್ರಿ ಪ್ರದೇಶದಲ್ಲಿ ಆಗುವ ಪ್ರತಿ ಚಲನವಲನಗಳ ಮೇಲೂ ಕಣ್ಣಿಡುವ ಸಾಮರ್ಥ್ಯ ಇದಕ್ಕಿರುತ್ತದೆ.
ಇದರ ಬೆಲೆ ಎಷ್ಟು?
ಈ ರೋಬೋಟ್ ನಾಯಿಗಳನ್ನು ಚೈನೀಸ್ ಸ್ಟಾರ್ಟ್-ಅಪ್ ಯುನಿಟ್ರೀ ರೋಬೋಟಿಕ್ಸ್ ಅಭಿವೃದ್ಧಿಪಡಿಸಿದೆ. ಯುನಿಟ್ರೀಯ ವೆಬ್‌ಸೈಟ್‌ನಲ್ಲಿರುವ ರೋಬೋಟ್ ನಾಯಿಗಳ ಬೆಲೆ $2,800 (ಅಂದಾಜು 2,34,177 ರೂ.) ಮತ್ತು $100,000 (ಅಂದಾಜು 83,59,000) ಆಗಿದೆ.
ಗೋಲ್ಡನ್ ಡ್ರ್ಯಾಗನ್ ಎಂದರೇನು?
ಗೋಲ್ಡನ್ ಡ್ರ್ಯಾಗನ್ ಎಂದು ಕರೆಯಲಾಗುವ ಮಿಲಿಟರಿ ಡ್ರಿಲ್ ಚೀನಾ ಮತ್ತು ಕಾಂಬೋಡಿಯಾ ನಡುವಿನ ಅತಿದೊಡ್ಡ ಜಂಟಿ ಮಿಲಿಟರಿ ವ್ಯಾಯಾಮವಾಗಿದೆ. ಮೇ 16 ರಂದು ಪ್ರಾರಂಭವಾದ 15 ದಿನಗಳ ಅಭ್ಯಾಸವು ಮೇ 30 ರವರೆಗೆ ಮುಂದುವರಿದಿದೆ.. ಇದು 14 ಯುದ್ಧನೌಕೆಗಳು, ಎರಡು ಹೆಲಿಕಾಪ್ಟರ್‌ಗಳು, 69 ಶಸ್ತ್ರಸಜ್ಜಿತ ವಾಹನಗಳು ಮತ್ತು ಟ್ಯಾಂಕ್‌ಗಳನ್ನು ಒಳಗೊಂಡಿರುತ್ತದೆ ಮತ್ತು ಲೈವ್-ಫೈರ್, ಭಯೋತ್ಪಾದನಾ ವಿರೋಧಿ ಮತ್ತು ಮಾನವೀಯ ರಕ್ಷಣಾ ಡ್ರಿಲ್‌ಗಳನ್ನು ಒಳಗೊಂಡಿರುತ್ತದೆ.
ಮಿಲಿಟರಿ ಕ್ಷೇತ್ರದಲ್ಲಿ ಚೀನಾ ಅತಿ ಹೆಚ್ಚು ಖರ್ಚು ಮಾಡುವ ದೇಶವಾಗಿದೆ. 2023-2024ರ ಹಣಕಾಸು ವರ್ಷದಲ್ಲಿ, ಭಾರತವು 73.9 ಬಿಲಿಯನ್ ಡಾಲರ್ ಅನ್ನು ಮೀಸಲಿಟ್ಟಿದ್ದರೆ, ಚೀನಾ ತನ್ನ ಬಜೆಟ್‌ನಲ್ಲಿ 229 ಬಿಲಿಯನ್ ಡಾಲರ್ ಮಿಲಿಟರಿಗಾಗಿ ಕಾಯ್ದಿರಿಸಿದೆ.ಚೀನಾವು PLA ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಒಟ್ಟು 2.05 ಮಿಲಿಯನ್ ಸೈನಿಕರನ್ನು ಹೊಂದಿದೆ.