ಮುಂಬೈ: 2019ರ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್ ಕಳೆದ 7 ಪಂದ್ಯಗಳಲ್ಲಿ 317 ರನ್ ಸಿಡಿಸಿ ಮಿಂಚಿದ್ದಾರೆ. ಅಲ್ಲದೇ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು. ಈ ಪಂದ್ಯದ ಬಳಿಕ ಸಿಕ್ಕ ಬಿಡುವಿನ ಅವಧಿಯಲ್ಲಿ ರಾಹುಲ್ ವಿಶೇಷ ಚೇತನ ಮಕ್ಕಳ ಕೇಂದ್ರಕ್ಕೆ ಭೇಟಿ ಸಮಯ ಕಳೆದಿದ್ದಾರೆ.
ಮುಂಬೈ ಬಂದ್ರಾ ಪ್ರದೇಶದಲ್ಲಿರುವ ಮುಸ್ಕಾನ್ ಫೌಂಡೇಶನ್‍ನ ವಿಶೇಷ ಚೇತನ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿದ್ದ ರಾಹುಲ್ ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ಕಳೆದಿದ್ದಾರೆ. ಈ ವೇಳೆ ಮಕ್ಕಳೊಂದಿಗೆ ತೆಗೆದುಕೊಂಡಿದ್ದ ಫೋಟೋಗಳನ್ನು ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಕೆಎಲ್ ರಾಹುಲ್ ಅವರು ನಮ್ಮ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿ ಸಮಯವನ್ನು ಕಳೆದಿದ್ದಾರೆ. ಸ್ಟಾರ್ ಆಟಗಾರರು ಇಂತಹ ಕಾರ್ಯಕ್ಕೆ ಮುಂದಾಗಿದ್ದು ಉತ್ತಮ ನಡೆಯಾಗಿದ್ದು, ಅವರ ಈ ಭೇಟಿ ಕೆಲ ಮಕ್ಕಳಿಗೆ ಪ್ರೇರಣೆ ಆಗಲಿದೆ. ರಾಹುಲ್ ಭೇಟಿಯಿಂದ ಮಕ್ಕಳು ಅಚ್ಚರಿಗೊಂಡಿದ್ದರು. ಇದನ್ನಷ್ಟೇ ನಾವು ಸ್ಟಾರ್ ಗಳಿಂದ ನಿರೀಕ್ಷೆ ಮಾಡುತ್ತೇವೆ. ಅವರಿಗೆ ಧನ್ಯವಾದ ಎಂದು ಸಂಸ್ಥೆ ಪೋಸ್ಟ್ ನಲ್ಲಿ ತಿಳಿಸಿದೆ.
ರಾಹುಲ್ ಕಳೆದ ವರ್ಷ ಫಾರ್ಮ್ ಸಮಸ್ಯೆಯಿಂದ ನಿರಾಸೆ ಮೂಡಿಸಿದ್ದರು. ಆದರೆ ಸದ್ಯ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವುದು ವಿಶ್ವಕಪ್ ಆಯ್ಕೆ ಬಗ್ಗೆ ಮೇಲೆ ಕುತೂಹಲ ಮೂಡಿಸಿದೆ. ನಾಳೆ ಬಿಸಿಸಿಐ ವಿಶ್ವಕಪ್ ಟೂರ್ನಿಗೆ 15 ಆಟಗಾರರ ಪಟ್ಟಿಯನ್ನು ಘೋಷಣೆ ಮಾಡುವ ಸಾಧ್ಯತೆ ಇದ್ದು, 26 ವರ್ಷದ ಕೆಎಲ್ ರಾಹುಲ್ ಸ್ಥಾನ ಪಡೆಯುತ್ತರಾ ಎಂಬ ಕುತೂಹಲ ಹೆಚ್ಚಿದೆ.