‘ಏಪ್ರಿಲ್‍ನಲ್ಲಿ ಸೆಟ್ಲ್ ಮಾಡಿಕೊಳ್ಳೋಣ’- ಜೇಮ್ಸ್ ನೀಶಮ್‍ ಸವಾಲು ಸ್ವೀಕರಿಸಿದ ಕೆಎಲ್ ರಾಹುಲ್

Public TV
2 Min Read
KL RAHUL copy

ಮೌಂಟ್ ಮಾಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಕೆ.ಎಲ್.ರಾಹುಲ್ ಹಾಗೂ ಜೇಮ್ಸ್ ನೀಶಮ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಪಂದ್ಯದ ಬಳಿಕ ಈ ಕುರಿತು ಟ್ವೀಟ್ ಮಾಡಿದ್ದ ಜೇಮ್ಸ್ ನೀಶಮ್, ರಾಹುಲ್ ಕಾಲೆಳೆಯಲು ಪ್ರಯತ್ನಿಸಿದ್ದರು. ಸದ್ಯ ಜೇಮ್ಸ್ ನೀಶಮ್ ಸವಾಲಿಗೆ ತಿರುಗೇಟು ನೀಡಿರುವ ರಾಹುಲ್ ಏಪ್ರಿಲ್‍ನಲ್ಲಿ ಇದನ್ನು ಸೆಟ್ಲ್ ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ.

ಮೌಂಟ್ ಮಾಂಗನುಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಟೀಂ ಇಂಡಿಯಾ 19.5ನೇ ಓವರಿನಲ್ಲಿ ರಾಹುಲ್ ರನ್ ಓಟಕ್ಕೆ ಜೇಮ್ಸ್ ನೀಶಮ್ ಅಡ್ಡ ಬಂದಿದ್ದರು. ಶ್ರೇಯಸ್ ಅಯ್ಯರ್ ರೊಂದಿಗೆ ಬ್ಯಾಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಸಿಂಗಲ್ ರನ್ ಓಡಲು ಯತ್ನಿಸಿದ್ದರು. ಆದರೆ ಬೌಲಿಂಗ್ ಮಾಡುತ್ತಿದ್ದ ಜೇಮ್ಸ್ ನೀಶಮ್ ಕ್ರಿಸ್‍ನಲ್ಲಿ ರಾಹುಲ್ ಓಟಕ್ಕೆ ಅಡ್ಡಲಾಗಿ ನಿಂತಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ರಾಹುಲ್ ಅಲ್ಲಿಯೇ ಜೇಮ್ಸ್ ನೀಶಮ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.

ಇತ್ತ ಪಂದ್ಯದ ಬಳಿಕ ಈ ಘಟನೆಯ ಕುರಿತು ಫೋಟೋ ಟ್ವೀಟ್ ಮಾಡಿದ್ದ ಜೇಮ್ಸ್ ನೀಶಮ್, ‘ಪೇಪರ್, ಸಿಸರ್ಸ್, ರಾಕ್’ ಎಂದು ಬರೆದು ಹಲ್ಲು ಕಿಸಿಯುವ ಇಮೋಜಿ ಹಾಕಿದ್ದರು. ಅಲ್ಲದೇ ಪಂದ್ಯದ ಬಳಿಕ ಮಾತನಾಡಿದ್ದ ಜೇಮ್ಸ್ ನೀಶಮ್ ಕೆಎಲ್ ರಾಹುಲ್ ಅವರ ಬ್ಯಾಟಿಂಗ್‍ಗೆ ಪ್ರಶಂಸೆ ವ್ಯಕ್ತಪಡಿಸಿ, ಏಪ್ರಿಲ್‍ನಲ್ಲಿ ನಡೆಯಲಿರುವ ಐಪಿಎಲ್‍ಗೂ ರನ್‍ಗಳನ್ನು ಉಳಿಸಿಕೊಳ್ಳುವಂತೆ ತಮಾಷೆ ಮಾಡಿದ್ದರು. ಇತ್ತ ಜೇಮ್ಸ್ ನೀಶಮ್‍ರ ಟ್ವೀಟನ್ನು ರೀ ಟ್ವೀಟ್ ಮಾಡಿದ್ದ ಐಸಿಸಿ, ‘ಸೂಪರ್ ಓವರ್ ಬದಲು ನಾವು ಇದನ್ನು ಶುರು ಮಾಡಬೇಕೇನೋ’ ಎಂದು ಪ್ರಶ್ನಿಸಿ ಟ್ರೋಲ್ ಮಾಡಿತ್ತು.

ಸದ್ಯ ಜೇಮ್ಸ್ ನೀಶಮ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಇದನ್ನು ಏಪ್ರಿಲ್‍ನಲ್ಲಿ ಸೆಟ್ಲ್ ಮಾಡಿಕೊಳ್ಳೋಣ ಎಂದು ಪ್ರತಿಕ್ರಿಯೆ ನೀಡಿ ಸವಾಲು ಸ್ವೀಕರಿಸಿದ್ದಾರೆ. ಅಂದಹಾಗೆ ಜೇಮ್ಸ್ ನೀಶಮ್ ಮುಂದಿನ ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಲಿದ್ದಾರೆ. 50 ಲಕ್ಷ ರೂ.ಗೆ ಜೇಮ್ಸ್ ನೀಶಮ್‍ರನ್ನು ಪಂಜಾಬ್ ತಂಡ ಖರೀದಿ ಮಾಡಿದೆ. ಅಂದಹಾಗೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಈ ಬಾರಿಯ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *